‘ಕ್ಲಸ್ಟರ್-2 ಅವೇಕ್ ಕುಡ್ಲ’: ‘ನವಜಾಗೃತಿ ಕಾರ್ಯಕ್ರಮ’

‘ಕ್ಲಸ್ಟರ್-2 ಅವೇಕ್ ಕುಡ್ಲ’: ‘ನವಜಾಗೃತಿ ಕಾರ್ಯಕ್ರಮ’

ಮಂಗಳೂರು: ನಗರದ ಮುಳಿಹಿತ್ಲು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಅವೇಕ್ ಕುಡ್ಲ ಪರಿಕಲ್ಪನೆಯ ಮಾದರಿ ವಾರ್ಡ್ ಯೋಜನೆಯ ಅನುಭವದ ಆಧಾರದಲ್ಲಿ ಮುಂದಿನ ಹಂತವಾಗಿ ‘ಕ್ಲಸ್ಟರ್-2 ಅವೇಕ್ ಕುಡ್ಲ’ವನ್ನು ‘ನವಜಾಗೃತಿ ಕಾರ್ಯಕ್ರಮ’ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಜ.1ರಂದು ಬೆಳಗ್ಗೆ 8 ಗಂಟೆಗೆ ಹೊಯಿಗೆಬಜಾರ್ನ ಚಿನ್ಮಯ ಮಿಷನ್ ಮುಂಭಾಗದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟೆಕಾರ್ ತಿಳಿಸಿದರು.

ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಯುಗೇಶಾನಂದಜೀ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರ ಟ್ರಾಫಿಕ್ ಪೊಲೀಸ್ ಹಾಗೂ ಮೂರು ವಾರ್ಡುಗಳ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪೋರ್ಟ್, ಕಂಟೋನ್ಮೆಂಟ್ ಮತ್ತು ಅತ್ತಾವರ ವಾರ್ಡುಗಳಲ್ಲಿ ಮನೆ ಮನೆ ಭೇಟಿ, ಸ್ಥಳೀಯ ಸೇವಾ ಸಂಸ್ಥೆಗಳೊಂದಿಗೆ ಮುಖಾಮುಖಿ, ಸುಗಮ ಸಂಚಾರ, ವಾಣಿಜ್ಯ ಮಳಿಗೆಗಳ, ಉದ್ಯಮಗಳ, ಯುವ ಮನಸ್ಸುಗಳ, ವಸತಿ ಸಂಕೀರ್ಣ, ಕಾರ್ಪೊರೇಟ್- ಹಸುರೀಕರಣದ ಜಾಗೃತಿ, ಬ್ಲ್ಯಾಕ್ ಸ್ಪಾಟ್ ಫಿಕ್ಸಿಂಗ್, ಅಪಾಯಕಾರಿ ಸ್ಥಳಗಳ ದುರಸ್ತಿ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. 

ಈ ಕಾರ್ಯಕ್ರಮದ ನಂತರ ಒಂದು ವಾರದವರೆಗೆ ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಸಲಹೆ, ಸೂಚನೆಗಳಿಗೆ ಟ್ರಸ್ಟಿನ ಕಚೇರಿಯ ದೂರವಾಣಿ (0824-3557955)ಸಂಪರ್ಕವು ಮುಕ್ತವಾಗಿ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದರು.

ಟ್ರಸ್ಟ್ ವತಿಯಿಂದ ಶೀಘ್ರದಲ್ಲೇ ಅಂಬಾನಗರದ ಮುಳಿಹಿತ್ಲು ಪ್ರದೇಶದಲ್ಲಿ ‘1000 ಮನೆಗಳ ಪ್ರಾಯೋಗಿಕ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಯೋಜನೆ’ ಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಜಾರಿಗೆ ತರಲಾಗುವುದು. ಟ್ರಸ್ಟ್ನ ಹತ್ತು ವರ್ಷದ ಚಟುವಟಿಕೆಗಳ ಅಂಗವಾಗಿ ಮುಂದಿನ ಫೆಬ್ರವರಿ  ೮ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಆಸಕ್ತ ಯುವಜನತೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದಲ್ಲಿ ‘ಸರಕಾರಿ ಉದ್ಯೋಗಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಜಾಗೃತಿ’ ಕಾರ್ಯಾಗಾರವನ್ನು ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗುವುದು. ಮುಂದಿನ ದಿನಗಳಲ್ಲಿ ಈ ವಿಷಯಕ್ಕೆ ಸಂಬಂಽಸಿದಂತೆ ಹೆಚ್ಚಿನ ಜ್ಞಾನ ಹಾಗೂ ಕೌಶಲ್ಯ ತರಬೇತಿಯನ್ನು ಒದಗಿಸುವ ಉದ್ದೇಶದಿಂದ ಯುವಜನತೆಯೊಂದಿಗೆ ಟ್ರಸ್ಟ್ ತಜ್ಞರ ಸಮಿತಿ ನಿರಂತರ ಸಂಪರ್ಕದಲ್ಲಿರಿಸಿಕೊಂಡು ಅಗತ್ಯ ಮಾರ್ಗದರ್ಶನವನ್ನು ನೀಡಲಿದೆ ಎಂದು ವಿವರಿಸಿದರು. 

ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಗುರುತಿಸಿ, ‘ಅವೇಕ್ ಕುಡ್ಲ ಆಪ್’ ಮೂಲಕ ಜನರು ನೇರವಾಗಿ ಅವುಗಳನ್ನು ದಾಖಲಿಸಬಹುದು. ದಾಖಲಾದ ಸಮಸ್ಯೆಗಳನ್ನು ಅವರ ನೇತೃತ್ವದಲ್ಲಿ, ಸಂಬಂಧಪಟ್ಟ ಇಲಾಖೆಗಳ ಸಹಯೋಗ ಮತ್ತು ಸ್ಥಳೀಯರ ಪಾಲ್ಗೊಳ್ಳುವಿಕೆಯಿಂದ ‘ಅಧ್ಯಯನ -ಜಾಗೃತಿ - ಮೇಲ್ವಿಚಾರಣೆ - ಸಮನ್ವಯ- ಅನುಸರಣೆ’ ಎಂಬ ಪಂಚತತ್ವದೊಂದಿಗೆ ಪರಿಹರಿಸುವ ಮೂಲಕ ಕಾರ್ಯ ನಿರ್ವಹಿಸಲಾಗುತ್ತದೆ ಎಂದರು.

ಟ್ರಸ್ಟ್ ಅಧ್ಯಕ್ಷ ಸೀತಾರಾಮ ಎ., ಉಪಾಧ್ಯಕ್ಷ ಡಾ. ಪ್ರವೀಣ್, ಖಜಾಂಚಿ ರಾಮಣ್ಣ, ಟ್ರಸ್ಟಿ ಮಂಜುಳಾ, ಡಾ. ನಯನಾ ಪಕ್ಕಳ, ಸರಿತಾ, ನೇಹಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article