ಡಿ.5 ರಂದು ನೂತನ ಗರ್ಭಗುಡಿ ಹಾಗೂ ಕಟ್ಟಡದ ಶಿಲಾನ್ಯಾಸ
ಮಂಗಳೂರು: ನಗರ ಹೊರವಲಯದ ಬೆಂಗರೆ ವೀರಭಾರತಿ ವ್ಯಾಯಾಮ ಶಾಲೆಯಲ್ಲಿ ಶ್ರೀ ರಾಮಚಂದ್ರ ದೇವರಿಗೆ ಹಾಗೂ ಆಂಜನೇಯ ದೇವರಿಗೆ ನೂತನ ಗರ್ಭಗುಡಿ ಹಾಗೂ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಡಿ.5ರಂದು ಬೆಳಗ್ಗೆ 8.55ಕ್ಕೆ ನಡೆಯಲಿದೆ.
ವೇದಮೂರ್ತಿ ಶಿವಪ್ರಸಾದ್ ತಂತ್ರಿ ಅವರ ಮಾರ್ಗದರ್ಶನದಲ್ಲಿ ಉಡುಪಿ ಶ್ಯಾಮಿಲಿ ಫೌಂಡೇಶನ್ ಟ್ರಸ್ಟ್ ಸ್ಥಾಪಕ ನಾಡೋಜ ಡಾ.ಜಿ. ಶಂಕರ್ ಅವರು ಶಿಲಾನ್ಯಾಸ ನೆರವೇರಿಸುವರು. ಮುಂಬೈ ಮೊಗವೀರ ವ್ಯವಸ್ಥಾಪಕ ಶಿಕ್ಷಣ ಮಂಡಳಿ ಅಧ್ಯಕ್ಷ ಅಜಿತ್ ಜಿ. ಸುವರ್ಣ ಅಧ್ಯಕ್ಷತೆ ವಹಿಸುವರು. ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಬೆಂಗರೆ ವೀರ ಹನುಮಾನ್ ವ್ಯಾಯಾಮ ಶಾಲೆ ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಶಶಿಕುಮಾರ್ ಬೆಂಗರೆ, ಬೆಂಗರೆ ಮಹಾಜನ ಸಭಾ ಅಧ್ಯಕ್ಷ ಸಂಜಯ ಸುವರ್ಣ, ಕರ್ನಾಟಕ ಪರ್ಸಿನ್ ಬೋಟ್ ಮೀನುಗಾರರ ಸಂಘ ಅಧ್ಯಕ್ಷ ಅನಿಲ್‌ಕುಮಾರ್, ಮಂಗಳೂರು ಯಾಂತ್ರೀಕೃತ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ಅಧ್ಯಕ್ಷ ವರದರಾಜ ಬಂಗೇರ, ಮಂಗಳೂರು ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ವ್ಯಾಯಾಮ ಶಾಲೆಯ ಜೀರ್ಣೋದ್ಧಾರ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ಬೆಂಗ್ರೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1926ರಲ್ಲಿ ಸ್ಥಾಪನೆಗೊಂಡ ವೀರಭಾರತಿ ವ್ಯಾಯಾಮ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದೆ. ಶ್ರೀ ರಾಮಚಂದ್ರ ದೇವರಿಗೆ ಹಾಗೂ ಆಂಜನೇಯ ದೇವರಿಗೆ ಪ್ರತ್ಯೇಕ ಗರ್ಭಗುಡಿ ಹಾಗೂ ನೂತನ ದೇವಸ್ಥಾನ ನಿರ್ಮಾಣ ಸಂಬಂಽಸಿ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದೆ. ಶತಮಾನೋತ್ಸವ ಕಾರ್ಯಕ್ರಮ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ದೇವರ ಪ್ರತಿಷ್ಠೆಯೊಂದಿಗೆ ನಡೆಯಲಿದೆ. ವ್ಯಾಯಾಮ ಶಾಲೆಯ ಜೀರ್ಣೋದ್ಧಾರ ಕಾರ್ಯಕ್ಕೆ 1.50 ಕೋಟಿ ರೂ. ಅಂದಾಜಿಸಲಾಗಿದೆ. ಭಕ್ತರು ಹಾಗೂ ದಾನಿಗಳು ಸಹಕರಿಸಬೇಕು ಎಂದರು.
ಜೀರ್ಣೋದ್ಧಾರ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಚೇತನ್ ಬೆಂಗ್ರೆ, ವೀರಭಾರತಿ ವ್ಯಾಯಾಮ ಶಾಲೆ ಅಧ್ಯಕ್ಷ ಆನಂದ ಅಮೀನ್, ಪ್ರಮುಖರಾದ ಮೋಹನ್ ಅಮೀನ್, ಲಕ್ಷ್ಮಣ ಬಿಕಾಂ, ಧನಂಜಯ ಪುತ್ರನ್, ಹರೀಶ್ಚಂದ್ರ ಪುತ್ರನ್ ಉಪಸ್ಥಿತರಿದ್ದರು.