ಡಿ.9ರಂದು ಸ್ವಚ್ಛತಾ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ

ಡಿ.9ರಂದು ಸ್ವಚ್ಛತಾ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ

ಮಂಗಳೂರು: ದ.ಕ ಜಿಲ್ಲೆಯಾದ್ಯಂತ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಸಂಜೀವಿನಿ ಒಕ್ಕೂಟದ ಗುತ್ತಿಗೆಯಡಿ ದುಡಿಯುತ್ತಿರುವ ಪೌರ ಕಾರ್ಮಿಕರು ಮತ್ತು ಸ್ವಚ್ಛತಾ ವಾಹನ ಚಾಲಕರನ್ನು ನೇರ ನೇಮಕಾತಿ ಮಾಡಿಕೊಂಡು ಪಂಚಾಯತ್ ವತಿಯಿಂದಲೇ ಕನಿಷ್ಠ ವೇತನ ಪಾವತಿಸುವಂತೆ ಆಗ್ರಹಿಸಿ ಡಿ.9 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ಉರ್ವ ಪತ್ರಿಕಾ ಭವನ ಬಳಿಯಿಂದ ಜಿಲ್ಲಾ ಪಂಚಾಯತ್‌ವರೆಗೆ ಕಾಲ್ನಡಿಗೆ ಜಾಥ ನಡೆಯಲಿದ್ದು, ಬಳಿಕ ಜಿ.ಪಂ. ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಂದು ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ  ಪ್ರಧಾನ ಕಾರ್ಯದರ್ಶಿ ಎಸ್.ಪಿ. ಆನಂದ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೌರ ಕಾರ್ಮಿಕಕರು ಕನಿಷ್ಠ ವೇತನ, ಪಿಎಫ್-ಇಎಸ್‌ಐ, ಮಾಸ್ಕ್, ಗ್ಲೌಸ್, ಆರೋಗ್ಯ ಕಾರ್ಡ್, ವೈದ್ಯಕೀಯ ತಪಾಸಣೆ ಯಾವುದೂ ಇಲ್ಲದೆ ಕಳೆದ 8 ವರ್ಷಗಳಿಂದ ಸಂಜೀವಿನಿ ಒಕ್ಕೂಟದ ಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರದಲ್ಲಿ 2-3 ದಿನ ಕೆಲಸ, ದಿನಕ್ಕೆ 300 ರೂ. ನಂತೆ ತಿಂಗಳಿಗೆ 3,000-4,000 ರೂ. ಸಂಬಳ ನೀಡುತ್ತಿದ್ದಾರೆ ಎಂದರು.

ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಸ್ವಚ್ಛತಾ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಸಂಜೀವಿನಿ ಒಕ್ಕೂಟದಿಂದ ಬಿಡುಗಡೆಗೊಳಿಸಿ, ಪಂಚಾಯತ್ ನ ಪೌರ ಕಾರ್ಮಿಕರೆಂದು ಪರಿಗಣಿಸಿ, ಪಂಚಾಯತ್ ವತಿಯಿಂದ ಸರಕಾರದ ಆದೇಶದಂತೆ ವೇತನ ಪಾವತಿ ಮಾಡಬೇಕು. ನಿಯಮಿತ ಆರೋಗ್ಯ ತಪಾಸಣೆ, ಆರೋಗ್ಯ ಕಾರ್ಡ್, ಕೆಲಸಕ್ಕೆ ವೇಳೆ ಹಾಕಬೇಕಾದ ವಿವಿಧ ವಸ್ತುಗಳು, ರಜಾ ಸೌಲಭ್ಯ ಮೊದಲಾದವುಗಳನ್ನು ನೀಡಿ, ತಿಂಗಳು ಪೂರ್ತಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.

ವಾಹನ ಚಾಲಕಿಯಾಗಿ ದುಡಿಯುತ್ತಿರುವ ಪುತ್ತೂರು ತಾಲೂಕಿನ ಪೌಲಿನ್ ಮೊಂತೇರೊ ಮಾತನಾಡಿ, ವಾರದಲ್ಲಿ 3 ದಿನ ಕೆಲಸವಾದರೂ ಬೆಳಗ್ಗೆ 8ರಿಂದ ಸಂಜೆ 5.30ಕ್ಕೆ ಕೆಲಸ ಮಾಡಬೇಕು. ಜತೆಗೆ ಮನೆ ಮನೆಯಿಂದ ಹಣ ಸಂಗ್ರಹಕ್ಕೂ ಹೋಗಬೇಕು. ಕೆಲವೊಮ್ಮೆ ಮನೆಯವರಿಂದ ಬೈಗುಳವನ್ನೂ ಕೇಳಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ವೇತನ ನೀಡಿ ತಿಂಗಳು ಪೂರ್ತಿ ಕೆಲಸ ನೀಡಬೇಕು. ಇದರಿಂದ ಮನೆ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೂ ಅನುಕೂಲವಾಗಲಿದೆ ಎಂದರು.

ಗ್ರಾಮ ಪಂಚಾಯತ್‌ಗಳಲ್ಲಿ ಸಂಜೀವಿನಿ ಒಕ್ಕೂಟದಡಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ತಿಂಗಳು ಪೂರ್ತಿ ಕೆಲಸ ನೀಡದೆ ಶೋಷಣೆ ಮತ್ತು ದಬ್ಬಾಳಿಕೆ ನಡೆಯುತ್ತಿದ್ದು, ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಮೊದಲಾದವುಗಳಿಗೆ ಸಮಸ್ಯೆಯಾಗುತ್ತಿದೆ. ಈಗಾಗಲೇ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಡಳಿತ-ಜಿಲ್ಲಾ ಪಂಚಾಯತ್‌ಗಳಿಗೆ ಹಲವು ಬಾರಿ ಮನವಿ ನೀಡದರೂ ಸ್ಪಂದಿಸಿಲ್ಲ. ಹಾಗಾಗಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಎಸ್.ಪಿ. ಆನಂದ ಹೇಳಿದರು.

ಈ ಸಂದರ್ಭದಲ್ಲಿ ಪೌರ ಕಾರ್ಮಿಕೆಯರಾದ ಪುತ್ತೂರಿನ ದೀಪ್ತಿ ಎಂ., ಹೇಮಾ ಕಡಬ, ರೇಣುಕಾ ಬೆಳ್ತಂಗಡಿ ಮತ್ತು ವಿನೋದಾ ಬೆಳ್ತಂಗಡಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article