ಪುತ್ತಿಗೆ ಕುಮಾರ ಗೌಡಗೆ ಬಾಬು ಕುಡ್ತಡ್ಕ ಪ್ರಶಸ್ತಿ
ಮಂಗಳೂರು: ನಗರದ ಜಲ್ಲಿಗುಡ್ಡೆ ಸ್ವಸ್ತಿಕ್ ಕಲಾ ಕೇಂದ್ರ ವತಿಯಿಂದ ನೀಡಲಾಗುವ 2025-26ನೇ ಸಾಲಿನ ಪ್ರತಿಷ್ಠಿತ ಬಾಬು ಕುಡ್ತಡ್ಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ಪುತ್ತಿಗೆ ಕುಮಾರ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಯಕ್ಷರಂಗದ ಮಂತ್ರ ಪ್ರತಿಭೆ ಬಾಬು ಕುಡ್ತಡ್ಕ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಶಾಶ್ವತ ಫಲಕ, ಸ್ಮರಣಿಕೆ, ಪದಕ ಹಾಗೂ 10 ಸಾವಿರ ರೂ. ನಗದು ಒಳಗೊಂಡಿದೆ. ಪುತ್ತಿಗೆ ಕುಮಾರ ಗೌಡ ಅವರು ವೇಣೂರು, ಧರ್ಮಸ್ಥಳ, ಕೂಡ್ಲು, ಕುಂಡಾವು ಮೇಳಗಳಲ್ಲಿ ತಿರುಗಾಟ ನಡೆಸಿ 1976ರಿಂದ 25 ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ ಎಂದು ಸ್ವಸ್ತಿಕ್ ಕಲಾ ಕೇಂದ್ರದ ಸಂಚಾಲಕ ಕೆ.ಸಿ. ಹರಿಶ್ಚಂದ್ರ ರಾವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಮತ್ತು ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಯೋಗದಲ್ಲಿ ಡಿ.7ರಂದು ಸಂಜೆ 4 ಗಂಟೆಗೆ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಲಾಕೇಂದ್ರದ ಅಧ್ಯಕ್ಷೆ ಲಲಿತಾ ಗೌಡ ಅಧ್ಯಕ್ಷತೆ ವಹಿಲಿದ್ದಾರೆ. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ರಂಗ ಸಾಹಿತಿ ಚಂದ್ರಶೇಖರ್ ಕರ್ಕೇರ, ಕುಲಾಲ ಯುವ ವೇದಿಕೆ ಅಧ್ಯಕ್ಷ ಅನಿಲ್ ದಾಸ್, ಲೆಕ್ಕಪರಿಶೋಧಕ ಎ.ಕೃಷ್ಣ ಮೂರ್ತಿ, ರಾಮಕೃಷ್ಣ ಬಾಲಕಾಶ್ರಮದ ನಿರ್ವಾಹಕ ಸ್ವಾಮಿ ಯುಗೇಶಾನಂದ ಮೊದಲಾದವರು ಭಾಗವಹಿಸಲಿದ್ದಾರೆ. ಡಾ. ಪ್ರಿಯಾ ಹರೀಶ್ ಅಭಿನಂದನಾ ಭಾಷಣ ಮಾಡುವರು. ಸಭಾ ಕಾರ್ಯಕ್ರಮಕ್ಕೂ ಮೊದಲು ‘ಶಾಂಭವಿ ವಿಜಯ’ ಯಕ್ಷಗಾನ ತಾಳಮದ್ದಲೆ ನಡೆಯಲಿದೆ ಎಂದರು.
ಕೇಂದ್ರದ ಗೌರವಾಧ್ಯಕ್ಷ ಬಿ. ಪ್ರಕಾಶ್ ಪೈ, ಅಧ್ಯಕ್ಷೆ ಲಲಿತಾ ಗೌಡ, ಪ್ರಧಾನ ಕಾರ್ಯದರ್ಶಿ ಆನಂದ ರಾವ್, ಸೇವಾ ಕಾರ್ಯದರ್ಶಿ ಸುಮಲತಾ, ಸಾಂಸ್ಕೃತಿಕ ಕಾರ್ಯದರ್ಶಿ ಚಂದ್ರಕಲಾ, ಶೋಭಾ ಹರೀಶ್ ಉಪಸ್ಥಿತರಿದ್ದರು.