ಶಿಕ್ಷಿತ ಮಹಿಳೆ ಸಮಾಜ ಪರಿವರ್ತನೆಯ ಪ್ರೇರಕ ಶಕ್ತಿ: ಸ್ವಾಮಿ ಯುಗೇಶಾನಂದಜಿ
Friday, December 12, 2025
ಮಂಗಳೂರು: ಸ್ವಾಮಿ ವಿವೇಕಾನಂದರು ಮಹಿಳೆಯರನ್ನು ಸಮಾಜದ ನಿಜವಾದ ಶಕ್ತಿ ಎಂದು ಪರಿಗಣಿಸಿದರು. ಅವರ ದೃಷ್ಟಿಯಲ್ಲಿ ಮಹಿಳೆ ವಿದ್ಯಾವಂತಳಾದಾಗ, ಒಂದು ಕುಟುಂಬ ಮಾತ್ರವಲ್ಲ, ಸಂಪೂರ್ಣ ಸಮಾಜ ಜಾಗೃತಿಯಾಗುತ್ತದೆ. ಮಹಿಳೆಯರು ಮೌಲ್ಯಾಧಾರಿತ ಶಿಕ್ಷಣ ಪಡೆದುಕೊಂಡಾಗ, ಜವಾಬ್ದಾರಿಯುತ ನಾಗರಿಕರೂ ಆಗುತ್ತಾರೆ.
ಶಿಕ್ಷಣ ಮಹಿಳೆಯರಿಗೆ ಜ್ಞಾನ ಮಾತ್ರವಲ್ಲ, ನಿರ್ಣಯ ಸಾಮರ್ಥ್ಯ, ಧೈರ್ಯ, ಸ್ವಾವಲಂಬನೆ, ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನೀಡುತ್ತದೆ ಎಂದು ಮಂಗಳೂರಿನ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ಮುಖ್ಯಸ್ಥ ಸ್ವಾಮಿ ಯುಗೇಶಾನಂದಜಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಐವತ್ತೊಂದನೇ ಉಪನ್ಯಾಸದಲ್ಲಿ ‘ಶಿಕ್ಷಿತ ಮಹಿಳೆ-ಶಕ್ತಿಶಾಲಿ ಸಮಾಜ: ವಿವೇಕಾನಂದರ ಆದರ್ಶ’ ಎಂಬ ವಿಷಯದ ಕುರಿತು ಮಂಗಳೂರು ಬಲ್ಮಠದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅವರು ಮಾತನಾಡಿದರು.
ಮಹಿಳೆ ಕುಟುಂಬದ ಮೊದಲ ಗುರುವಾಗಿರುವುದರಿಂದ, ಮಕ್ಕಳಲ್ಲಿ ಸಂಸ್ಕಾರ, ಶಿಸ್ತು, ಮತ್ತು ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ. ಮಹಿಳೆ ಶಿಕ್ಷಣ ಪಡೆದಾಗ, ಆ ಮನೆಯ ವಾತಾವರಣ ಜಾಗೃತಿಯಾಗುತ್ತದೆ, ಆ ಮನೆಯ ಜಾಗೃತಿ ಸಮಾಜದ ಜಾಗೃತಿಗೆ ದಾರಿ ಮಾಡುತ್ತದೆ. ಇಂದಿನ ಯುಗದಲ್ಲಿ ಮಹಿಳೆಯರು ವಿಜ್ಞಾನ, ಶಿಕ್ಷಣ, ಆಡಳಿತ, ತಂತ್ರಜ್ಞಾನ-ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ‘ಮಹಿಳೆಯರ ಪ್ರಗತಿಯನ್ನು ನಿರಾಕರಿಸಿದ ಸಮಾಜ ಎಂದಿಗೂ ಮುಂದುವರಿಯಲಾರದು ಎಂದರು.
ಮಹಿಳೆಯರಿಗೆ ಸಮಾನ ಶಿಕ್ಷಣ, ಸಮಾನ ಅವಕಾಶ, ಮತ್ತು ಸಮಾನ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣ ಪಡೆದ ಮಹಿಳೆ ಕೇವಲ ತನ್ನ ಜೀವನವನ್ನೇ ಅಲ್ಲ, ಅನೇಕ ಜೀವಗಳನ್ನು ಬೆಳಗುವ ಶಕ್ತಿ ಹೊಂದಿದ್ದಾಳೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಬಲ್ಮಠದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಗದೀಶ ಬಾಳ, ಸಹಾಯಕ ಪ್ರಾಧ್ಯಾಪಕಿ ಹಾಗೂ ಐಕ್ಯೂಎಸಿ ಸಂಯೋಜಕಿ ಡಾ. ಮಂಜುಳಾ ಮಲ್ಯ ಎಂ., ಪ್ರಾಧ್ಯಾಪಕಿ ಹಾಗೂ ಐಕ್ಯೂಎಸಿ ಸಹ-ಸಂಯೋಜಕಿ ಚಂದ್ರಿಕಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಜಯಶ್ರೀ ಮತ್ತು ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿ ಸುನಿತಾ ವಂದಿಸಿದರು. ವಿದ್ಯಾರ್ಥಿನಿ ಸುಕನ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.



