ಮಂಗಳೂರು: ಮನಪಾ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರನ್ನು ನೇರ ಪಾವತಿ ಅಥವಾ ಖಾಯಂಗೊಳಿಸುವಂತೆ ಶಾಸಕ ಕಾಮತ್ ಆಗ್ರಹ
ಈ ವರ್ಗದ ಎಲ್ಲಾ ಕಾರ್ಮಿಕರು ಬಹಳ ಕಷ್ಟಪಟ್ಟು ದುಡಿಯುವವರು. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಬಂಧುಗಳು ಸಹ ಇದರಲ್ಲಿ ಹೆಚ್ಚಾಗಿದ್ದು ನಗರದ ಸ್ವಚ್ಛತೆಯ ಹಿಂದೆ ಅವರ ಅಪಾರ ಶ್ರಮವಿದೆ. ಒಂದು ದಿನ ಅವರೆಲ್ಲರೂ ಕರ್ತವ್ಯಕ್ಕೆ ಗೈರಾದರೆ ನಗರದ ಸ್ವಚ್ಛತೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ಇವರಿಗೆ ಯಾವುದೇ ಪಿಂಚಣಿ ಇಲ್ಲ. ಹೀಗಾಗಿ ಭವಿಷ್ಯದಲ್ಲಿ ಇವರು ತೀವ್ರ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದಾಗೆಲ್ಲಾ ಆ ಪ್ರಸ್ತಾವನೆ ನಮ್ಮ ಮುಂದೆ ಎಂದು ಹೇಳುತ್ತಾ ಇದೀಗ ಎರಡೂವರೆ ಎರಡು ವರ್ಷಗಳಿದಿವೆ ಹೊರತು ಯಾವುದೇ ಕ್ರಮಕೈಗೊಂಡಿಲ್ಲ. ಮ.ನ.ಪಾದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಗವಾನ್ ದಾಸ್ ಮತ್ತು ಇತರರು ಪ್ರಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯ ನೀಡಿರುವ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಸದನದ ಗಮನ ಸೆಳೆದರು.
ಈ ಕಾರ್ಮಿಕರು ಮಂಗಳೂರಿನಲ್ಲಿ ಎರಡೆರಡು ಬಾರಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ನಾವು ಅವರ ನ್ಯಾಯಯುತ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರ ಹಾಗೂ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇವೆ. ಸರ್ಕಾರ ಇನ್ನೂ ಸಹ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ನಾವೂ ಸಹ ಅವರೊಂದಿಗೆ ಪ್ರತಿಭಟನೆಯಲ್ಲಿ ಸೇರಿ ಕೊಳ್ಳಬೇಕಾಗುತ್ತದೆ. ಕಸ ಸಾಗಿಸುವ ವಾಹನಗಳಿಗೆ ವಿಮೆಯನ್ನೂ ಸಹ ನವೀಕರಣಗೊಳಿಸದೇ ಬೇಜವಾಬ್ದಾರಿ ತೋರಲಾಗಿದ್ದು ಒಂದು ವೇಳೆ ಯಾವುದೇ ದುರ್ಘಟನೆ ಸಂಭವಿಸಿ ಕಾರ್ಮಿಕರಿಗೆ ತೊಂದರೆಯಾದರೆ ಯಾರು ಹೊಣೆ? ಸರ್ಕಾರದ ಬಳಿ ವಾಹನ ವಿಮೆಗೂ ದುಡ್ಡಿಲ್ಲವೇ ಎಂದು ಶಾಸಕರು ಪ್ರಶ್ನಿಸಿದರು.