ಅನ್ಯಾಯದ ಕುರಿತು ಧ್ವನಿ ಎತ್ತಬೇಕು: ಐವನ್ ಫ್ರಾನ್ಸಿಸ್ ಲೋಬೋ

ಅನ್ಯಾಯದ ಕುರಿತು ಧ್ವನಿ ಎತ್ತಬೇಕು: ಐವನ್ ಫ್ರಾನ್ಸಿಸ್ ಲೋಬೋ


ಮಂಗಳೂರು: ಬಂಡವಾಳ ಶಾಹಿಗಳ ಪ್ರಭಾವಕ್ಕೆ ಸಿಲುಕಿ ಅಪಾಯದಲ್ಲಿರುವ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸಲು ಸಿದ್ಧರಾಗಬೇಕಿದೆ. ಆ ಮೂಲಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಐವನ್ ಫ್ರಾನ್ಸಿಸ್ ಲೋಬೋ ಕರೆ ನೀಡಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ, ಮಾನವಿಕ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತ್ರಿಕೋಶ ಸಹಯೋಗದಲ್ಲಿ ಡಾ. ಕೆ. ಶಿವರಾಮ ಕಾರಂತ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪ್ರಜಾಪ್ರಭುತ್ವದ ಕುರಿತು ಜಾಗತಿಕ ದೃಷ್ಟಿಕೋನ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಪ್ರಜಾತಂತ್ರ ಕೇವಲ ಮತದಾನ ಮತ್ತು ಭಾಷಣಕ್ಕೆ ಸೀಮಿತವಾಗಬಾರದು. ಬದಲಾಗಿ ಎಲ್ಲರೂ ಪ್ರಜಾಸತ್ತಾತ್ಮಕ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲದೇ, ಜೀವನಮಟ್ಟವನ್ನು ಸುಧಾರಿಸಿಕೊಳ್ಳುವ ಮೂಲಕ ಸಮಾಜದ ಏಳಿಗೆಗೆ ಎಲ್ಲರೂ ಶ್ರಮಿಸಬೇಕು. ವಿದ್ಯಾರ್ಥಿಗಳು ಪ್ರಜಾತಂತ್ರ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ಅದರಲ್ಲಿರುವ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ಗಣಪತಿ ಗೌಡ, ವಿದ್ಯಾರ್ಥಿಗಳನ್ನು ಬುಗುರಿಯಂತೆ ಆಡಿಸುವ ಶಕ್ತಿಗಳು ಸಮಾಜದಲ್ಲಿವೆ. ಆದರೆ, ಬುಗುರಿ ದಾರ ತುಂಡಾದ ಮೇಲೆ ಎಸೆದು ಹೋಗುತ್ತಾರೆ. ಹಾಗಾಗಿ ಬದುಕಿನಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು. ಉತ್ತಮ ಆಲೋಚನೆಗಳಿಂದ ಪ್ರಭಾವಿತರಾಗಿ ನಿಮ್ಮದೇ ಸ್ವಂತ ನಿಲುವು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಮಾನವಿಕ ಸಂಘದ ಸಹ ನಿರ್ದೇಶಕ ರಂಗಪ್ಪ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ರಾಜ್ಯಶಾಸ್ತ್ರ ವಿಭಾಗದ ಡಾ. ರುಕ್ಮಯ್ಯ, ಸುನೀಲ್ ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article