ಎಕ್ಸಲೆಂಟ್ ಪಿಯು ಕಾಲೇಜಿನ ವಿವಿಧ ಘಟಕಗಳಿಂದ 'ಕೃಷಿ–ಖುಷಿ'
Monday, December 1, 2025
ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್, ರೇಂಜರ್ಸ್–ರೋವರ್ಸ್, ರೆಡ್ ಕ್ರಾಸ್ ಮತ್ತು ವಾಣಿಜ್ಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಬೆಳುವಾಯಿ ಸಮೀಪ ಕೃಷಿ–ಖುಷಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಕೃಷಿ ಬದುಕಿನ ನೈಜ ಅನುಭವ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಗತಿಪರ ಕೃಷಿಕ ಶ್ರೀ ಉಮಾನಾಥ ದೇವಾಡಿಗ ಅವರು ತಮ್ಮ ಕೃಷಿ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು, ಭೂಮಿಯ ಸೇವೆ ಜೀವನಕ್ಕೆ ಪ್ರೀತಿಯನ್ನೂ ನೆಮ್ಮದಿಯನ್ನು ನೀಡುತ್ತದೆ. ಕೃಷಿಯಿಂದ ದೂರವಾಗುತ್ತಿರುವ ಇಂದಿನ ಪೀಳಿಗೆ ಮಣ್ಣಿನ ಮಹತ್ವವನ್ನು ಅರಿತುಕೊಳ್ಳಬೇಕಿದೆ. ಇಲ್ಲದಿದ್ದರೆ ಪ್ರಕೃತಿಯೇ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಅವರು ಎಚ್ಚರಿಸಿದ ಅವರು ಶ್ರದ್ಧೆ, ಪರಿಶ್ರಮದಿಂದ ಮಣ್ಣಿನಲ್ಲಿ ದುಡಿದರೆ ಭೂಮಿಯೇ ಬಂಗಾರವಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಕೃಷಿಕ ದೇಶದ ಬೆನ್ನೆಲುಬು. ಅವನ ಪರಿಶ್ರಮವೇ ಅವನ ಗೌರವ. ಮಣ್ಣಿನ ಜೊತೆ ಬೆರೆತು, ಕೃಷಿಯ ಕಷ್ಟ–ಸುಖಗಳನ್ನು ಅರಿತುಕೊಳ್ಳುವುದು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಮಹತ್ವದ ಪಾಠ. ಇಂತಹ ಕಾರ್ಯಕ್ರಮಗಳು ನೈಜ ಜೀವನ ಕೌಶಲ್ಯಗಳು ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕೆಸರ್ಗದ್ದೆ ತಾನೋಜಿ ಶೆಟ್ಟಿ ಮತ್ತು ಸತೀಶ್ ಪೂಜಾರಿಯವರ ಗದ್ದೆಗಳಲ್ಲಿ ವಿದ್ಯಾರ್ಥಿಗಳು ನೇಜಿ ನೆಡುವ ಮೂಲಕ ಕೃಷಿಯ ಪ್ರಾಯೋಗಿಕ ಜ್ಞಾನದ ಜೊತೆಗೆ ಕೆಸರಿನಲ್ಲಿ ಮೋಜಿನ ಆಟವನ್ನು ಆಡಿ ಖುಷಿಯನ್ನು ಅನುಭವಿಸಿದರು.
ಬೆಳುವಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಘು ಪೂಜಾರಿ, ಹಾಗೂ ಎನ್‌ಎಸ್‌ಎಸ್, ರೇಂಜರ್ಸ್–ರೋವರ್ಸ್, ರೆಡ್ ಕ್ರಾಸ್ ಮತ್ತು ವಾಣಿಜ್ಯ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
