ವಿಶ್ವಕಪ್ ಗೆದ್ದ ಕಬಡ್ಡಿ ಆಟಗಾತಿ೯ ಧನಲಕ್ಷ್ಮೀಗೆ ಆಳ್ವಾಸ್ ನಲ್ಲಿ ಅಭಿನಂದನೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಧನಲಕ್ಷ್ಮೀ ಪೂಜಾರಿ, "ವಿಶ್ವ ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಅವಕಾಶ ದೊರೆತ ಕ್ಷಣ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿತ್ತು" ಎಂದು ಭಾವಪೂರ್ಣವಾಗಿ ನುಡಿದರು. ತಮ್ಮ ಯಶಸ್ಸಿನ ಹಿಂದೆ ಆಳ್ವಾಸ್ ಸಂಸ್ಥೆಯ ಪಾತ್ರವನ್ನು ಉಲ್ಲೇಖಿಸಿ, "ಆಳ್ವಾಸ್ ಸೇರದಿದ್ದರೆ ಇಂತಹ ಸಾಧನೆ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಸೇರಿದ್ದರಿಂದ ಕ್ರೀಡೆ ಮಾತ್ರವಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು" ಎಂದರು.
ಈ ಸಂದರ್ಭದಲ್ಲಿ ಧನಲಕ್ಷ್ಮೀ ಹಾಗೂ ಅವರ ಪೋಷಕರನ್ನು ಸನ್ಮಾನಿಸಿ, ಆಳ್ವಾಸ್ ಸಂಸ್ಥೆಯ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಉದ್ಯಮಿ ನಾರಾಯಣ ಪಿ.ಎಂ., ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆಯ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉಪಾಧ್ಯಕ್ಷ ಸುದರ್ಶನ್, ಧನಲಕ್ಷ್ಮೀ ಅವರ ಕೋಚ್ ಹಂಸವತಿ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಂಗಳೂರು, ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ಮೂಡುಬಿದಿರೆ) ಇವರ ಸಂಯುಕ್ತ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದ.ಕ. ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಕ ನವೀನ್‌ಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.

