ಸರಕಾರಿ ಶಾಲೆಗೆ ವಿದ್ಯಾರ್ಥಿಗಳ ಸೆಳೆಯಲು ವಿನೂತನ ಪ್ರಯತ್ನ: ವಿದ್ಯಾರ್ಥಿಗಳಿಗೆ ಉಚಿತ ಬ್ಯಾಂಕ್ ಖಾತೆ

ಸರಕಾರಿ ಶಾಲೆಗೆ ವಿದ್ಯಾರ್ಥಿಗಳ ಸೆಳೆಯಲು ವಿನೂತನ ಪ್ರಯತ್ನ: ವಿದ್ಯಾರ್ಥಿಗಳಿಗೆ ಉಚಿತ ಬ್ಯಾಂಕ್ ಖಾತೆ

ಮಂಗಳೂರು: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂಬ ಕಾರಣ ನೀಡಿ ರಾಜ್ಯದ ವಿವಿಧ ಭಾಗಗಳಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ವಿಲೀನಗೊಳಿಸುವ, ಮುಚ್ಚುವ ಪ್ರಕ್ರಿಯೆಗಳು ನಡೆಯುತ್ತಿರುವ ನಡುವೆಯೇ ಮಕ್ಕಳ ದಾಖಲಾತಿ ಹೆಚ್ಚಿಸಲು ವಿನೂತನ ಪ್ರಯತ್ನವೊಂದು ಮಂಗಳೂರಿನ ಸರಕಾರಿ ಶಾಲೆಯಲ್ಲಿ ನಡೆದಿದೆ.

ಶತಮಾನದ ಹೊಸ್ತಿಲಿನಲ್ಲಿರುವ ಮಂಗಳೂರು ಅಶೋಕ ನಗರದ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರುವುದನ್ನು ಮನಗಂಡ ದಾನಿಗಳು ಶಾಲೆಗೆ ಮಕ್ಕಳನ್ನು ಸೆಳೆಯಲು ವಿಶೇಷ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಶಾಲೆಯಲ್ಲಿ  ದಾನಿಗಳ ನೆರವಿನಿಂದ ಉಚಿತ ಬ್ಯಾಂಕ್ ಖಾತೆ ತೆರೆಯುವ ಪ್ರಯತ್ನ ನಡೆದಿದೆ.

2025-26ನೇ ಶೈಕ್ಷಣಿಕ ವರ್ಷದಲ್ಲಿ ದಾಖಲಾದ 1ರಿಂದ 3ನೇ ತರಗತಿಯ 17 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯನ್ನು ಇಲ್ಲಿ ತೆರೆಯಲಾಗಿದೆ. ವಿಶೇಷವೆಂದರೆ, 5 ವರ್ಷದವರೆಗೆ ಅನ್ವಯವಾಗುವಂತೆ ಪ್ರತಿ ವಿದ್ಯಾರ್ಥಿಯ ಹೆಸರಿನಲ್ಲಿ ತಲಾ 5 ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. 17 ವಿದ್ಯಾರ್ಥಿಗಳ ಠೇವಣಿಯ ಮೊತ್ತವನ್ನು ಉದ್ಯಮಿ ದಿನಕರ ರಾವ್ ಪಾವತಿಸಿದ್ದಾರೆ. 5 ವರ್ಷದ ನಂತರ ಇದು 6,690 ರೂ ಆಗಿರುತ್ತದೆ.

ಆ ವಿದ್ಯಾರ್ಥಿ 5 ವರ್ಷ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದರೆ 5 ವರ್ಷದ ಬಳಿಕ ವಿದ್ಯಾರ್ಥಿ ಆ ಹಣವನ್ನು ಖಾತೆಯಿಂದ ಪಡೆಯಬಹುದು. ಈ ಮೂಲಕ ಕನ್ನಡ ಮಾಧ್ಯಮ ಶಾಲೆಯತ್ತ ಆಕರ್ಷಿಸುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ. ಶಾಲೆಯಲ್ಲಿ ಸದ್ಯ 100ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಶಾಲೆಗೆ ಸರ್ಕಾರದ ಪ್ರೋತ್ಸಾಹ ಸಾಕಷ್ಟು ಸಿಗದಿದ್ದರೂ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಸಂಘ ಸಂಸ್ಥೆ ದಾನಿಗಳ ನೆರವು ಮಾತ್ರ ಉತ್ತಮವಾಗಿಯೇ ಸಿಗುತ್ತಿದೆ. ಇದೇ ಕಾರಣದಿಂದ ಶಾಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಪೂರ್ಣಕಾಲಿಕ ಶಿಕ್ಷಕರು ಇಲ್ಲಿ ಇಲ್ಲದಿದ್ದರೂ ಎಲ್ಲ ಅತಿಥಿ ಶಿಕ್ಷಕರನ್ನು ಸ್ಥಳೀಯರ ನೆರವಿನ ಮೂಲಕವೇ ಉಸ್ತುವಾರಿ ನೋಡಿಕೊಳ್ಳಲಾಗುತ್ತಿದೆ. ಇದೀಗ ವಿದ್ಯಾರ್ಥಿಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಶಾಲೆಯ ಮಕ್ಕಳ ಹೆಸರಿನಲ್ಲಿ ತಲಾ 5000 ರೂ. ಠೇವಣಿ ಇಡುವ ಕೆಲಸ ಮಾಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ ಮಾಡುವ ಪ್ರಯತ್ನಕ್ಕೆ ಉದ್ಯಮಿ ದಿನಕರ್ ರಾವ್ ಮುಂದಾಗಿದ್ದಾರೆ. ಅಷ್ಟು ಮಾತ್ರವಲ್ಲದೇ, ಯಕ್ಷನಾಟ್ಯದ ಉಚಿತ ಕಲಿಕೆಯನ್ನು ನೀಡಲಾಗುತ್ತಿದೆ. ಅಶೋಕನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಪೈಕಿ ಆಸಕ್ತಿ ಇರುವ ಮಕ್ಕಳಿಗೆ ಉಚಿತ ಕೆಲವು ಕಲಿಕೆಗಳು ಶಾಲೆಯ ಪಕ್ಕದ ಸಾಯಿ ವಿಹಾರ್ ನಿವಾಸದಲ್ಲಿ ಉದ್ಯಮಿ ದಿನಕರ ರಾವ್ ಹಾಗೂ ಅವರ ಪತ್ನಿಯ ವಿಶೇಷ ಕಾಳಜಿಯಿಂದ ನಡೆಸಲಾಗುತ್ತಿದೆ. ಯಕ್ಷಗಾನ, ಕರಾಟೆ, ಚಿತ್ರಕಲೆ, ಯೋಗ, ಧ್ಯಾನ ಹೀಗೆ ವಿವಿಧ ವಿಷಯಗಳ ಬಗ್ಗೆ ಮಕ್ಕಳಿಗೆ ಉಚಿತ ಕಲಿಕೆ ಸಾಯಿ ವಿಹಾರ್‌ನಲ್ಲಿದೆ. 

17 ವಿದ್ಯಾರ್ಥಿಗಳ ಖಾತೆ..

"ಈ ಯೋಜನೆ ಈ ವರ್ಷ ಆರಂಭವಾಗಿದ್ದು, 17 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. 1ನೇ ತರಗತಿಯ 10 ವಿದ್ಯಾರ್ಥಿಗಳು, 2 ಮತ್ತು 3ನೇ ತರಗತಿಯ 7 ವಿದ್ಯಾರ್ಥಿಗಳ ಹೆಸರಿನಲ್ಲಿ ತಲಾ 5 ಸಾವಿರ ರೂ. ಠೇವಣಿ ಇಡಲಾಗಿದೆ" ಎಂದಿದ್ದಾರೆ ಮುಖ್ಯೋಪಾಧ್ಯಾಯಿನಿ ಜಾಯ್ ಸಂವಿತಾ 

ವ್ಯಾಪಕ ಮೆಚ್ಚುಗೆ..

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಶಿಕ್ಷಕರ ನೇಮಕಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯ ನಡುವೆಯೇ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ನಡೆದಿರುವ ಈ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article