ಗೃಹರಕ್ಷಕರು ಕರ್ತವ್ಯದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಿ
ಮಂಗಳೂರು: ಅಖಿಲ ಭಾರತ ಗೃಹರಕ್ಷಕದಳ ಉತ್ಥಾನ ದಿನಾಚರಣೆ ಶನಿವಾರ ಮೇರಿಹಿಲ್ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದಲ್ಲಿ ಗೃಹರಕ್ಷಕರ ದಿನವನ್ನು ಆಚರಿಸಲಾಯಿತು.
ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ. ಸಂತೋಷ್ ಕುಮಾರ್ ಮಾತನಾಡಿ, ಖಾಕಿ ಸಮವಸ್ತ್ರವನ್ನು ಧರಿಸಿದಾಗ ಸಾರ್ವಜನಿಕರಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಹಾಗೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸಮವಸ್ತ್ರದಲ್ಲಿರುವಾಗ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸುವುದು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಕಾಪಾಡುವ ಗೃಹರಕ್ಷಕರ ಸೇವೆ ಶ್ಲಾಘನೀಯ ಎಂದರು.
ಗೃಹರಕ್ಷಕ ದಳದ ಮಾಜಿ ಸಮಾದೇಷ್ಟ ಡಾ.ಮುರಳಿಮೋಹನ್ ಚೂಂತಾರು ಮಾತನಾಡಿ, ಗೃಹರಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡುವುದರೊಂದಿಗೆ ತಮ್ಮ ಆರೋಗ್ಯವನ್ನು ಕಾಪಾಡುವಂತೆ ಸಲಹೆ ನೀಡಿದರು.
ಅಧ್ಯಕ್ಷತೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾ ಗೃಹರಕ್ಷಕದಳದ ಪ್ರಭಾರ ಸಮಾದೇಷ್ಟ ಅನಿಲ್ ಕುಮಾರ್ ಎಸ್. ಬೂಮರಡ್ಡಿ ವಹಿಸಿದ್ದರು.
2025ನೇ ಸಾಲಿನಲ್ಲಿ ನಿಧನರಾದ ಗೃಹರಕ್ಷಕರಿಗೆ ಗೌರವ ನಮನ ಸಲ್ಲಿಸಲಾಯಿತು.
ಇಲಾಖೆಯಲ್ಲಿ ಸಾಧನೆಗೈದ ಗೃಹರಕ್ಷಕರಾದ ಬಂಟ್ವಾಳ ಘಟಕದ ಶಕಿಲಾ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸಂತೋಷ್ ಸಲ್ಡಾನ, ಉಳ್ಳಾಲ ಘಟಕದ ಮರೀಟಾ ಡಿ’ಸೋಜ ಇವರನ್ನು ಸನ್ಮಾನಿಸಲಾಯಿತು.
ಬೆಳ್ಳಾರೆ ಘಟಕಾಧಿಕಾರಿ ಎಂ. ವೀರನಾಥ ಸ್ವಾಗತಿಸಿ, ತೀರ್ಥೇಶ್ ಗೃಹರಕ್ಷಕರಿಗೆ ಪ್ರತಿಜ್ಞಾ ಸ್ವೀಕಾರ ನಡೆಸಿಕೊಟ್ಟರು. ಜಗದೀಶ್ ಉಳ್ಳಾಲ ನಿರೂಪಿಸಿದರು. ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ಶೇರಾ ವಂದಿಸಿದರು.
ಗೃಹರಕ್ಷಕದಳದ ಸಹಾಯಕ ಆಡಳಿತಾಧಿಕಾರಿ ಕವಿತಾ ಕೆ.ಸಿ, 15 ಘಟಕಗಳ ಘಟಕಾಧಿಕಾರಿಗಳು ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.