ಬೇಡಿಕೆ ಈಡೇರಿಕೆಗಾಗಿ ಬೀದಿಗಿಳಿದ ಸ್ವಚ್ಛತಾ ಕಾರ್ಮಿಕರು

ಬೇಡಿಕೆ ಈಡೇರಿಕೆಗಾಗಿ ಬೀದಿಗಿಳಿದ ಸ್ವಚ್ಛತಾ ಕಾರ್ಮಿಕರು


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೌರಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್‌ಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಕಾರ್ಮಿಕರು ಮತ್ತು ಸ್ವಚ್ಛತಾ ವಾಹನ ಚಾಲಕರು ತಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. 

ಉರ್ವಾ ಪತ್ರಿಕಾ ಭವನದಿಂದ ಕಾಲ್ನಡಿಗೆ ಜಾಥಾ ಹೊರಟ ಕಾರ್ಮಿಕರು ಘೋಷಣೆ ಕೂಗುತ್ತ ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ, ಕಾರ್ಯದರ್ಶಿ ಎಸ್.ಪಿ. ಆನಂದ್, ಸ್ವಚ್ಛತಾ ಕಾರ್ಮಿಕರು ಸಂಜೀವಿನಿ ಒಕ್ಕೂಟದ ಗುತ್ತಿಗೆ ಅಡಿಯಲ್ಲಿ ಕೇವಲ ರೂ. 300 ದಿನಗೂಲಿ ಪಡೆಯುತ್ತಿದ್ದಾರೆ. ಕಾರ್ಮಿಕರು ವರ್ಷಗಳಿನಿಂದ ಕನಿಷ್ಠ ವೇತನ, ಇಎಸ್‌ಐ, ಪಿಎಫ್, ಮಾಸ್ಕ್, ಆರೋಗ್ಯ ಕಾರ್ಡ್, ವೈದ್ಯಕೀಯ ತಪಾಸಣೆ, ತಿಂಗಳು ಪೂರ್ತಿ ಕೆಲಸ ಮುಂತಾದ ಮೂಲಭೂತ ಕಾರ್ಮಿಕ ಹಕ್ಕುಗಳಿಂದಲೇ ವಂಚಿತರಾಗಿದ್ದಾರೆ. ವಾರದಲ್ಲಿ ಕೇವಲ 2, 3 ದಿನ ಕೆಲಸ ನೀಡುವ ಮೂಲಕ ಕಾರ್ಮಿಕರ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರು ದಲಿತ ಸಮುದಾಯದ ಕಾರ್ಮಿಕರನ್ನು ವರ್ಷಗಳಿಂದ ಶೋಷಿಸುತ್ತಿದ್ದಾರೆ. ಸರಕಾರ ನೀಡುವ ಕನಿಷ್ಟ ವೇತನ ಗ್ರಾಮ ಪಂಚಾಯತ್ ಗುತ್ತಿಗೆದಾರರಿಗೆ ನೀಡುತ್ತಿವೆ, ಆದರೆ ಕಾರ್ಮಿಕರಿಗೆ ದಿನಕ್ಕೆ ಕೇವಲ 300 ರೂ. ಮಾತ್ರ ನೀಡುತ್ತಿದ್ದಾರೆ. ಕಳೆದ ವರ್ಷ ಫೆ.16ರಿಂದ ಈ ವರ್ಷದ ಜೂ.25ರ ತನಕ ಹಲವು ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಸಂಘಟನೆಯವರು ಕಿಡಿಕಾರಿದರು. ಸಂಜೀವಿನಿ ಒಕ್ಕೂಟದ ದಬ್ಬಾಳಿಕೆಯಿಂದ ಕಾರ್ಮಿಕರನ್ನು ಬಿಡುಗಡೆ ಮಾಡಿ, ಅವರನ್ನು ನೇರವಾಗಿ ಗ್ರಾಮ ಪಂಚಾಯತ್ನಿಂದಲೇ ನೇಮಿಸಬೇಕು, ಸ್ವಚ್ಛತಾ ಕಾರ್ಮಿಕರು ಹಾಗೂ ವಾಹನ ಚಾಲಕರನ್ನು ಖಾಯಂ ಪೌರಕಾರ್ಮಿಕರು ಎಂದು ಪರಿಗಣಿಸಿ ನೇರನೇಮಕಾತಿ ಮಾಡಬೇಕು ಕನಿಷ್ಠ ವೇತನ ಮತ್ತು ಸವಲತ್ತುಗಳಾದ ಇಎಸ್‌ಐ, ಪಿಎಫ್, ಆರೋಗ್ಯ ಕಾರ್ಡ್, ವಾರ್ಷಿಕ ರಜೆ,

ವೈದ್ಯಕೀಯ ತಪಾಸಣೆ, ಮಾಸ್ಕ್, ಗ್ಲೌಸ್ ನೀಡಬೇಕು. ಕನಿಷ್ಟ ವೇತನದ ಜೊತೆಗೆ ವಸತಿ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಬೇಕು. ಮನೆ-ಮನೆ ಕಸ ಶುಲ್ಕ ವಸೂಲಿ ಒತ್ತಾಯ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪ್ರತಿ ಮನೆಗೆ ರೂ. 50, ಅಂಗಡಿಗಳಿಗೆ ರೂ. 100 ಸಂಗ್ರಹಿಸುವ ಹೆಚ್ಚುವರಿ ಕೆಲಸವನ್ನು ಕಾರ್ಮಿಕರಿಂದ ಮಾಡಿಸುವುದು ‘ಅಕ್ರಮ’ ಎಂದು ಸಂಘಟನೆ ಆರೋಪಿಸಿದೆ.

ಪ್ರತಿಭಟನಾ ಮೆರವಣಿಗೆಯ ಅಂತ್ಯದಲ್ಲಿ, ಕಾರ್ಯಕರ್ತರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕರ್ಮಚಾರಿ ಆಯೋಗದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಸಹಿತ ಹಲವು ಕಾರ್ಮಿಕ ಮುಖಂಡರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article