ವಿವಾದಕ್ಕೀಡಾದ ರಿಷಬ್ ಶೆಟ್ಟಿ ಹರಕೆಯ ನೇಮ
ಮಂಗಳೂರು: ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ನಡೆಸಿದ ಹರಕೆಯ ನೇಮೋತ್ಸವ ಇದೀಗ ವಿವಾದಕ್ಕೆ ಕಾರಣವಾಗಿದೆ. ನೇಮೋತ್ಸಲದ ಸಂದರ್ಭ ದೈವ ನರ್ತಕರು ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದಕ್ಕೆ ಅಪಸ್ವರ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ ಮಾತ್ರವಲ್ಲ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕಾಂತಾರ ಚಾಪ್ಟರ್ 1 ಚಿತ್ರದ ಯಶಸ್ವಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ತಂಡದಿಂದ ಡಿ.4 ರಂದು ರಾತ್ರಿ ಮಂಗಳೂರಿನ ಕದ್ರಿ ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ನಡೆದಿತ್ತು. ನೇಮೋತ್ಸವ ಆರಂಭಕ್ಕೂ ಮುನ್ನ ದೈವಸ್ಥಾನದಲ್ಲಿ ದೈವ ಎಣ್ಣೆಬೂಳ್ಯ ನೀಡುವ ವಾಡಿಕೆ ಸಂಪ್ರದಾಯವಿದೆ. ಈ ವೇಳೆ ದೈವ ನರ್ತಕರು ತುಳುನಾಡಿನ ದೈವಾರಾಧನೆ ಸಂಪ್ರದಾಯ ಮೀರಿ ವರ್ತಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ವೇಳೆ ದೈವ ನರ್ತಕ ರಿಷಬ್ ಕಾಲ ಮೇಲೆ ಮಲಗಿದ್ದರು. ಕೋಲದ ವೇಳೆ ದೈವ ನರ್ತಕ ರಿಷಬ್ ಜೊತೆಗೆ ವರ್ತಿಸಿದ ರೀತಿ ವಿರುದ್ಧ ಟೀಕೆ ವ್ಯಕ್ತವಾಗಿದೆ.
‘ತುಳುನಾಡಿನ ದೈವಾರಾಧನೆಯಲ್ಲಿ ದೈವಗಳು ಈ ರೀತಿ ವರ್ತಿಸುವುದಿಲ್ಲ.ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ ,ದೈವವಲ್ಲ ಬದಲಾಗಿ ನರ್ತಕ’ ಎಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತುಳುನಾಡ ದೈವಾರಾಧಕರ ಪರ-ವಿರೋಧ ಚರ್ಚೆ ನಡೆದಿದೆ. ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ದೈವ ನರ್ತನ ನಿಯಮ ಮೀರಿ ವರ್ತಿಸಬಾರದು. ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ದೈವ ಕೋಲದ ಸಂಪ್ರದಾಯ ಮರೆತು ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.