ರೈಲುಗಳ ಮೇಲೆ ಕಲ್ಲು ತೂರಾಟ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಮಂಗಳೂರು: ಪಾಲಕ್ಕಾಡ್ ವಿಭಾಗದಲ್ಲಿ ಚಲಿಸುತ್ತಿದ್ದ ರೈಲುಗಳ ಮೇಲೆ ಇತ್ತೀಚೆಗೆ ಕಲ್ಲುತೂರಾಟ ನಡೆಸಿದ್ದ ಎರಡು ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಡಿ.12 ರಂದು ಮಂಗಳೂರು ಜಂಕ್ಷನ್ ಸಮೀಪ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಅಮಲೇರಿದ ಸ್ಥಿತಿಯಲ್ಲಿದ್ದ ಸುಬ್ಜಿತ್ ಮುಲ್ಲಿಕ್ (23) ಕಲ್ಲು ತೂರಾಟ ನಡೆಸಿ ರೈಲಿನ ಕಿಟಕಿ ಗಾಜುಗಳಿಗೆ ಹಾನಿಯನ್ನುಂಟು ಮಾಡಿದ್ದ. ರೈಲ್ವೆ ರಕ್ಷಣಾ ದಳ (ಆರ್ ಪಿ ಎಫ್) ಆತನನ್ನು ಬಂಧಿಸಿತ್ತು. ಈತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ
ಮತ್ತೊಂದು ಘಟನೆಯಲ್ಲಿ ಡಿ.15ರಂದು ತಿರುನಲ್ವೇಲಿ-ಜಾಮ್‌ನಗರ ಎಕ್ಸ್‌ಪ್ರೆಸ್ ಮೇಲೆ ಕ್ವಿಲಾಂಡಿ ಮತ್ತು ವೆಲ್ಲರಕ್ಕಾಡ್ ನಿಲ್ದಾಣಗಳ ನಡುವೆ ಕಲ್ಲು ತೂರಾಟ ನಡೆದಿತ್ತು. ಈ ಘಟನೆಯಲ್ಲಿ ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆರ್ಪಿಎಫ್ ಕೋಝಿಕ್ಕೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಿಬು ಎಂಬಾತನನ್ನು ಬಂಧಿಸಲಾಗಿತ್ತು. ಈತನಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರೈಲುಗಳಿಗೆ ಕಲ್ಲು ತೂರಾಟವು ಗಂಭೀರ ಅಪರಾಧವಾಗಿದ್ದು ಯಾರಾದರೂ ಕಲ್ಲು ತೂರಾಟ ನಡೆಸಿದರೆ ಅವರನ್ನು ಬಂಧಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.