ತಿರುಗಿ ಬಿದ್ದ ಚಿನ್ನಯ್ಯ-ತಿಮರೋಡಿ, ಮಟ್ಟಣ್ಣವರ್, ಸಮೀರ್ ಸಹಿತ ಐವರ ವಿರುದ್ಧ ದೂರು: ರಕ್ಷಣೆಗೆ ಆಗ್ರಹ

ತಿರುಗಿ ಬಿದ್ದ ಚಿನ್ನಯ್ಯ-ತಿಮರೋಡಿ, ಮಟ್ಟಣ್ಣವರ್, ಸಮೀರ್ ಸಹಿತ ಐವರ ವಿರುದ್ಧ ದೂರು: ರಕ್ಷಣೆಗೆ ಆಗ್ರಹ

ಮಂಗಳೂರು: ಜೈಲಿನಿಂದಲೇ ಹೊರ ಬರುತ್ತಲೇ ಚಿನ್ನಯ್ಯ ಬುರುಡೆ ತಂಡದ ವಿರುದ್ಧವೇ ತಿರುಗಿ ಬಿದ್ದಿದ್ದಾನೆ. 

ಧರ್ಮಸ್ಥಳ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಚಿನ್ನಯ್ಯ ಇದೀಗ ಮಹೇಶ್ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್ ಎಂ.ಡಿ. ಸಹಿತ ಐವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಸೌಜನ್ಯಾ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ಯೂಟ್ಯೂಬರ್ ಸಮೀರ್ ಎಂ.ಡಿ. ಹಾಗೂ ಸೌಜನ್ಯಾಳ ಮಾವ ವಿಠಲ ಗೌಡ ಅವರು ತನಗೆ ತನ್ನ ಕುಟುಂಬಕ್ಕೆ ತಮಗೆ ಜೀವಬೆದರಿಕೆ ಹಾಕಬಹುದು. ಆದ್ದರಿಂದ ತನಗೆ ರಕ್ಷಣೆ ನೀಡಬೇಕು ಎಂದು ಚಿನ್ನಯ್ಯ ಪೊಲೀಸ್ ದೂರಿನಲ್ಲಿ ಆಗ್ರಹಿಸಿದ್ದಾನೆ. 

ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಚಿನ್ನಯ್ಯ, ಡಿ.18 ರಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದ. ಅಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಚಿನ್ನಯ್ಯ ತನ್ನ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನಾ ಜೊತೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾನೆ. 

ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ, ಯೂಟ್ಯೂಬರ್ ಸಮೀರ್ ಎಂ.ಡಿ., ಸೌಜನ್ಯಾಳ ಮಾವ ವಿಠಲ ಗೌಡ, ಗಿರೀಶ್ ಮಟ್ಟಣ್ಣವರ್ ಹಾಗೂ ಸಂಗಡಿಗರು ತನಗೆ ಮತ್ತು ತನ್ನ ಪತ್ನಿ ಮಲ್ಲಿಕಾ ಯಾನೆ ನಾಗಮ್ಮ ಗೆ ಜೀವಬೆದರಿಕೆ ಹಾಕಬಹುದು. ಆದ್ದರಿಂದ ಸೂಕ್ತ ಕಾನೂನು ಕ್ರಮ ಕೈಗೊಂಡು ತಮಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕಲ್ಪಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. 

ಬೆಳ್ತಂಗಡಿ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ. 

ಎಸ್‌ಐಟಿ ಕಚೇರಿಗೆ..

ಧರ್ಮಸ್ಥಳ ಗ್ರಾಮದಲ್ಲಿಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿರುವ ಪ್ರಕರಣದ ಸಾಕ್ಷಿದೂರುದಾರ ದಿನಬಿಟ್ಟು ದಿನ ಬೆಳ್ತಂಗಡಿಯ ವಿಶೇಷ ತನಿಖಾ ದಳದ (ಎಸ್‌ಐಟಿ) ಕಚೇರಿಗೆ ಹಾಜರಾಗಬೇಕಾಗಿದೆ. ಜಾಮೀನು ನೀಡುವಾಗ ವಿಧಿಸಿರುವ ಷರತ್ತಿನಂತೆ ಆತ ನ್ಯಾಯಾಲಯದ ನಿರ್ದೇಶನ ಪಾಲಿಸಿ, ಎಸ್‌ಐಟಿ ಠಾಣೆಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ದಿನಬಿಟ್ಟು ದಿನ ಠಾಣೆಯಲ್ಲಿ ಹಾಜರಿ ಹಾಕಬೇಕಾಗುತ್ತದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article