ಟ್ರಾಫಿಕ್ ದಂಡ: ಮೋಸ ಹೋಗದಿರಿ
ಮಂಗಳೂರು: ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದಂಡವನ್ನು 50 ಶೇಕಡಾ ರಿಯಾಯಿತಿ ಯಲ್ಲಿ ಕಟ್ಟಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ ಇದನ್ನೇ ದುರುಪಯೋಗ ಮಾಡಿಕೊಂಡ ಸೈಬರ್ ಖದೀಮರು ಸಾರ್ವಜನಿಕರಿಗೆ ಎಪಿಕೆ ಫೈಲ್ಸ್ ಕಳಿಸುವ ಮೂಲಕ ಏಪ್ ಡೌನ್ಲೋಡ್ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದು ಜನಸಾಮಾನ್ಯರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ.
ಇದರ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು ಟ್ರಾಫಿಕ್ ದಂಡ ಕಟ್ಟಲು ಅಂತಹ ಯಾವುದೇ ಆಪ್‌ಗಳಿಲ್ಲ. ಆ ರೀತಿಯ ಎಪಿಕೆ ಫೈಲ್ಸ್ ಗಳನ್ನು ನಂಬಬೇಡಿ. ಸಾರ್ವಜನಿಕರು ಸಾರಿಗೆ ಇಲಾಖೆಯ ವೆಬ್‌ಸೈಟ್ ಅಥವಾ ಕರ್ನಾಟಕ ವನ್ ಸೆಂಟರ್ ಮೂಲಕ ಮಾತ್ರ ಟ್ರಾಫಿಕ್ ದಂಡವನ್ನು ಪಾವತಿ ಮಾಡಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಎಪಿಕೆ ಫೈಲ್ಸ್ ಲಿಂಕ್ ಗಳಲ್ಲಿರುವ ಏಪ್ ಗಳನ್ನು ಡೌನ್ಲೋಡ್ ಮಾಡಿದರೆ ನಿಮ್ಮ ಮೊಬೈಲ್ ಹ್ಯಾಕ್ ಆಗಬಹುದು. ಆಮೂಲಕ ಮೊಬೈಲ್ ಸಂಪರ್ಕದಲ್ಲಿರುವ ಬ್ಯಾಂಕ್ ಖಾತೆಗಳ ವಿವರಗಳು ಸೈಬರ್ ವಂಚಕರಿಗೆ ಸಿಗಬಹುದು. ನಿಮ್ಮ ಅಗತ್ಯವೇ ಇಲ್ಲದೆ ಬ್ಯಾಂಕಿನಲ್ಲಿರುವ ಮೊತ್ತವನ್ನು ವಂಚಕರು ಕಬಳಿಸಬಹುದು. ಹೀಗಾಗಿ ಟ್ರಾಫಿಕ್ ಮೊತ್ತವನ್ನು ಪಾವತಿ ಮಾಡುವುದಕ್ಕಾಗಿ ಯಾವುದೇ ರೀತಿಯ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ. ಯಾವುದೇ ಆಪ್‌ಗಳನ್ನು ಡೌನ್ಲೋಡ್ ಮಾಡುವುದಿದ್ದರೂ ಪ್ಲೇಸ್ಟೋರ್‌ನಿಂದ ಪಡೆಯಬೇಕೇ ವಿನಾ ಇಂತಹ ಡೈರೆಕ್ಟ್ ಫೈಲ್ಸ್ ಗಳಿಂದ ಮಾಡುವಂತಿಲ್ಲ ಅನ್ನೋದು ನೆನಪಿರಲಿ.
ಮೆಸೇಜ್ ಮೂಲಕ ಎಪಿಕೆ ಫೈಲ್ಸ್ ಮೂಲಕ ಬಂದಿದ್ದ ಲಿಂಕ್‌ಗಳನ್ನು ನಂಬಿ ಮಂಗಳೂರಿನ ಇಬ್ಬರು ಏಪ್ಸ್ ಡೌನ್ಲೋಡ್ ಮಾಡಿ ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ಯಾರು ಕೂಡ ಈ ರೀತಿಯ ಫೈಲ್ಸ್ ಬಂದಲ್ಲಿ ಸ್ಪಂದಿಸಬೇಡಿ. ತೊಂದರೆಗೆ ಸಿಲುಕಬೇಡಿ ಎಂದು ಕಮಿಷನರ್ ಸುಧೀರ್ ರೆಡ್ಡಿ ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ.