ಕಂಬಳ: ಹೊಸ ನಿಯಮ ಜಾರಿ
ಕನೆ ಹಲಗೆ ವಿಭಾಗದಲ್ಲಿ ಈಗಾಗಲೇ ಇದ್ದ ಗೊಂದಲದ ನಿರ್ವಹಣೆಗೆ ಈ ಬಾರಿ ಸಮಿತಿ ಸ್ಪಷ್ಟವಾದ ತೀರ್ಮಾನಕ್ಕೆ ಬಂದಿದೆ. ಹಿಂದಿನ ವರ್ಷಗಳಲ್ಲಿ ಕೋಣಗಳು ನಿಶಾನೆಗೆ ನೀರು ತಾಕದಿದ್ದರೂ, ಓಟದ ಸಮಯದಲ್ಲಿ ನೀರು ಹಾಯಿಸಿದ ಎತ್ತರವನ್ನು ಆಧರಿಸಿ ಬಹುಮಾನ ನೀಡುವ ಪದ್ಧತಿ ಇತ್ತು. ಇದು ಕೆಲವೊಮ್ಮೆ ಗೊಂದಲ ಮತ್ತು ಅನಗತ್ಯ ಚರ್ಚೆಗೆ ಕಾರಣವಾಗುತ್ತಿತ್ತು. ಇದಕ್ಕೆ ಕೊನೆಗಾಣಿಸುತ್ತಾ, ಈ ಬಾರಿ 6.5 ಕೋಲು ಮತ್ತು 7.5 ಕೋಲು ನಿಶಾನೆಗೆ ನೀರು ತಾಕಿದರಷ್ಟೇ ಬಹುಮಾನ ನೀಡುವಂತೆ ಕಂಬಳ ಸಮಿತಿ ನಿರ್ಧರಿಸಿದೆ.
ಕನೆ ಹಲಗೆ ವಿಭಾಗಕ್ಕೆ 3.30 ಗಂಟೆಯಲ್ಲಿ 5 ಸುತ್ತು ಕಡ್ಡಾಯ: ಈ ಹಿಂದೆ ಕನೆ ಹಲಗೆ ವಿಭಾಗದಲ್ಲಿ 4 ಸುತ್ತಿನ ಓಟಕ್ಕೆ ಅವಕಾಶವಿತ್ತು. ಆದರೆ ಈ ವರ್ಷದಿಂದ 3 ಗಂಟೆ 30 ನಿಮಿಷದೊಳಗೆ 5 ಸುತ್ತು ಓಟ ಮುಗಿಸುವುದು ಕಡ್ಡಾಯವಾಗಲಿದೆ. ನಿಗದಿತ ಸಮಯದೊಳಗೆ 5 ಸುತ್ತುಗಳನ್ನು ಪೂರ್ಣಗೊಳಿಸದಿದ್ದರೆ, ನಂತರ ಮತ್ತಷ್ಟು ಅವಕಾಶ ನೀಡಲಾಗುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಕಂಬಳವನ್ನು ನಿಯಮದಂತೆ 24 ಗಂಟೆಯೊಳಗೆ ಮುಗಿಸಲು ಈ ಕ್ರಮ ಜಾರಿಗೆ ತಂದಿರುವುದಾಗಿ ತಿಳಿಸಲಾಗಿದೆ.
ಕೋಣ ಬಿಡುವ ಸಮಯಕ್ಕೂ ಕಠಿಣ ನಿಯಮ: ಕಂಬಳದ ಇತರ ವಿಭಾಗಗಳಲ್ಲೂ ಕೋಣ ಗಂತಿಗೆ ಇಳಿಸುವ ಮತ್ತು ಬಿಡುವ ಸಮಯಕ್ಕೆ ಕಟ್ಟುನಿಟ್ಟಿನ ಮಿತಿ ನಿಗದಿಪಡಿಸಲಾಗಿದೆ.
ಅಡ್ಡ ಹಲಗೆ, ನೇಗಿಲು, ಹಗ್ಗ ಕಿರಿಯ ವಿಭಾಗಗಳಲ್ಲಿ: ಸ್ಪರ್ಧೆ ಮುಗಿದ ಬಳಿಕ ಕೋಣ ಗಂತಿಗೆ ಇಳಿಸಲು 3 ನಿಮಿಷ ಕಾಲಾವಕಾಶ. ವಿಳಂಬವಾದರೆ ಅವಕಾಶ ನಿರಾಕರಣೆಯ ಕ್ರಮ ಜಾರಿಯಾಗುತ್ತದೆ.
ಹಗ್ಗ ಹಿರಿಯ ಮತ್ತು ಅಡ್ಡ ಹಲಗೆ, ನೇಗಿಲು ವಿಭಾಗಗಳಲ್ಲಿ: ಕೋಣ ಬಿಡಲು 5 ನಿಮಿಷ ಅವಧಿ.
ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಗಳಲ್ಲಿ: ಕ್ರಮವಾಗಿ 8 ನಿಮಿಷ ಮತ್ತು 6 ನಿಮಿಷಗಳ ಕಾಲಾವಕಾಶ.
ಈ ಎಲ್ಲಾ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಸ್ಪರ್ಧಾಪರರಿಗೆ ನೀಡಲಾಗಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮ ಎಂದು ಕಂಬಳ ಸಮಿತಿ ಸಭೆಯಲ್ಲಿ ಘೋಷಿಸಲಾಗಿದೆ. ಯಾವುದೇ ಕಾರಣಕ್ಕೂ ತೀರ್ಪು ಪ್ರಶ್ನಿಸಲು ಅವಕಾಶವಿರುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.