ಚಿನ್ನಯ್ಯನೊಂದಿಗೆ ಸ್ವಾಮೀಜಿ ಭೇಟಿ ಮಾಡಿದ್ದು ನಿಜ: ತಿಮರೋಡಿ
ಗಡಿಪಾರು ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಇಂದು ಪುತ್ತೂರಿಗೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನಾನು ಮತ್ತು ಚಿನ್ನಯ್ಯ ಸ್ವಾಮೀಜಿಯನ್ನು ಭೇಟಿ ಮಾಡುವ ವೇಳೆ ನಮ್ಮ ಜೊತೆಗೆ ಸೌಜನ್ಯ ಮನೆಯವರು ಮತ್ತು ಸೌಜನ್ಯ ಪರ ಹೋರಾಟಗಾರರಿದ್ದರು. ಸ್ವಾಮೀಜಿಯೊಂದಿಗೆ ನಡೆದ ಮಾತುಕತೆಯಲ್ಲಿ ಚಿನ್ನಯ್ಯ ಎಲ್ಲವನ್ನೂ ಹೇಳಿದ್ದಾನೆ. ನಾನು ಬಿಡುಗಡೆ ಮಾಡಿದ ಒಂದೂವರೆ ಗಂಟೆಯ ವಿಡಿಯೋಕ್ಕಿಂತ ಹೆಚ್ಚೇ ಅಲ್ಲಿ ಮಾತನಾಡಿದ್ದಾನೆ. ಯಾರು ಅತ್ಯಾಚಾರ ಮಾಡಿದ್ದಾರೆ, ಮಾಡಿಸಿದ್ದಾರೆ ಎಲ್ಲವನ್ನೂ ಹೇಳಿದ್ದಾನೆ. ಸ್ವಾಮೀಜಿಯವರು ಆಗ ಈ ವಿಚಾರವನ್ನು ಮುಖ್ಯಮಂತ್ರಿಗಳಲ್ಲಿ ಹೇಳಿ ಶಿಕ್ಷೆ ಕೊಡಿಸುವುದಾಗಿ ಹೇಳಿದ್ದಾರೆ, ಸ್ವಾಮೀಜಿಗಳು ರಾಜಕೀಯ ಮಾಡುವುದನ್ನು ಬಿಟ್ಟು ನ್ಯಾಯ ಒದಗಿಸಲಿ ಎಂದರು.
ನನ್ನ ಮಾತು ಎಲ್ಲಾ ಸ್ವಾಮೀಜಿಗಳಿಗೂ ಅನ್ವಯಿಸುತ್ತದೆ. ನಾವು ನೇರವಾಗಿ ಸನಾತನ ಧರ್ಮದ ಪ್ರತಿಪಾದಕರು, ಹಿಂದೂ ಧರ್ಮದ ವಿರೋಧಿಗಳಲ್ಲ. ಈ ವಿಚಾರವನ್ನು ಹಿಂದೆಯೂ ಹೇಳಿದ್ದೇನೆ,ಇಂದೂ ಹೇಳುತ್ತೇನೆ ಮುಂದೆಯೂ ಹೇಳುತ್ತೇನೆ ಎಂದರು.
ಎಸ್‌ಐಟಿ ತನಿಖೆ ಬಗ್ಗೆ ಕೇಳಿ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‌ಐಟಿ ತನಿಖೆ ಆರಂಭವೇ ಆಗಿಲ್ಲ, ಅತ್ಯಾಚಾರಿಗಳ ವಿಚಾರಣೆ ಇನ್ನಷ್ಟೇ ಆಗಬೇಕಿದೆ. ಇಲ್ಲಿ ತನಕ ಬರೇ ಒಂದು ಬುರುಡೆ ಹಿಡಿದುಕೊಂಡು ನಾಟಕ ಮಾಡುತ್ತಿದ್ದಾರೆ ಅಷ್ಟೇ, ಎಸ್‌ಐಟಿ ಒಳಗಡೆಯೇ ಷಡ್ಯಂತ್ರ ಮಾಡುವವರು ತುಂಬಿದ್ದಾರೆ. ಸ್ವತಹ ಎಸ್.ಪಿ ಕೂಡಾ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ, ಮುಂದಿನ ದಿನಗಳಲ್ಲಿ ಎಲ್ಲಾ ಸತ್ಯವೂ ಹೊರಬರಲಿದೆ ಎಂದರು.
ನಮಗೆ ಯಾರ ಮೇಲೆಯೂ ನಂಬಿಕೆ ಇಲ್ಲದಂತೆ ಆಗಿದೆ, ಮಾದ್ಯಮ, ಕಾರ್ಯಾಂಗ ಯಾವುದರ ಮೇಲೆಯೂ ನಂಬಿಕೆಯಿಲ್ಲ ಆದರೆ ದೇಶದ ಕಾನೂನಿನ ಮೇಲೆ ಮಾತ್ರ ನಮಗೆ ನಂಬಿಕೆ ಇರೋದು, ಮುಂದಿನ ದಿನಗಳಲ್ಲಿ ಕಾನೂನು ಮೂಲಕವೇ ನಾವು ಹೋರಾಟವನ್ನು ಮಾಡುತ್ತೇವೆ. ಎಸ್‌ಐಟಿ ತನಿಖೆಯ ವರದಿ ಕೊಟ್ಟಿದೆ, ಅದು ಚಾರ್ಜ್ ಶೀಟ್ ಅಲ್ಲ, ಹೆಣ್ಣುಮಕ್ಕಳಿಗಾಗಿ ಹೋರಾಟ ಮಾಡುತ್ತಿದ್ದೇವೆ ಆದರೆ ಪೊಲೀಸರು ನನ್ನ ಗಡಿಪಾರು ಆದೇಶದಲ್ಲಿ ಹೆಣ್ಣುಮಕ್ಕಳಿಗೆ ದೌರ್ಜನ್ಯ ಮಾಡಿದ್ದೇವೆ ಎಂದು ಸೇರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂಜೆ..:
ಗಡಿಪಾರು ವಿಚಾರಣೆಗಾಗಿ ಪುತ್ತೂರು ಸಹಾಯಕ ಆಯುಕ್ತರ ಕಚೇರಿಗೆ ತೆರಳುವ ಮೊದಲು ಮಹೇಶ್ ಶೆಟ್ಟಿ ತಿಮರೋಡಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವರಿಗೆ ರುದ್ರಾಭಿಷೇಕ, ಪ್ರಾರ್ಥನೆ, ಎಳ್ಳೆಣ್ಣೆ ಮತ್ತು ತುಪ್ಪ ದೀಪ ಸೇವೆ ಸಲ್ಲಿಸಿದ್ದಾರೆ.