ತಟಸ್ಥವಾದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ! ಸದನದ ಗಮನ ಸೆಳೆದ ಶಾಸಕ ಮಂಜುನಾಥ ಭಂಡಾರಿ
ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ರಸ್ತೆ, ನೀರು ಒಳಚರಂಡಿ ಇತ್ಯಾದಿ ಮೂಲ ಸೌಲಭ್ಯಗಳನ್ನು ಒದಗಿಸಲು ಹಾಗೂ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಬಂದರು ಇತ್ಯಾದಿ ಕ್ಷೇತ್ರಗಳ ಸರ್ವೋತ್ತಮ ಅಭಿವೃದ್ಧಿಗಾಗಿ ಹಾಗೂ ಸಮಗ್ರ ಅಭಿವೃದ್ಧಿ ಹಾಗೂ ಸಮನ್ವಯತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರಕ್ಕೆ ಸೂಕ್ತ ಸಲಹೆ/ಅಭಿಪ್ರಾಯಗಳನ್ನು ನೀಡಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿತ್ತು.
ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಧನಸಹಾಯ ಮಂಜೂರು ಮಾಡುವುದು, ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ನಗರ/ಗ್ರಾಮೀಣ ಸ್ಥಳೀಯ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಧನಸಹಾಯ ಮಂಜೂರು ಮಾಡುವುದು ಮತ್ತು ಸಂಪನ್ಮೂಲ ಕ್ರೋಢೀಕರಿಸುವುದು.
ಕರಾವಳಿ ಜಿಲ್ಲೆಗಳಲ್ಲಿ ರಸ್ತೆ ಸಂಪರ್ಕವಿಲ್ಲದ ಪ್ರದೇಶಗಳಿಗೆ ರಸ್ತೆ ನಿರ್ಮಿಸುವುದು. ಪ್ರವಾಸೋದ್ಯಮ ಇಲಾಖೆಯು ಅಭಿವೃದ್ಧಿಪಡಿಸದೇ ಇರುವಂತಹ ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು.
ಸರ್ಕಾರದ ಇತರ ಯೋಜನೆಗಳಡಿಯಲ್ಲಿ ಕೈಗೊಳ್ಳದೇ ಇರುವಂತಹ, ಉಳಿದ ಯೋಜನೆಗಳು, ಆದರೆ, ಯಾವುದೇ ವೈಯಕ್ತಿಕ ಲಾಭವನ್ನೊಳಗೊಂಡ ಫಲಾನುಭವಿ ಆಧಾರಿತ ಯೋಜನೆಗಳನ್ನು ಕೈಗೊಳ್ಳತಕ್ಕದ್ದಲ್ಲ ಎಂದು ಇದೇ ಸಂದರ್ಭದಲ್ಲಿ ಉತ್ತರಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ಈ ಮೇಲ್ಕಂಡ ಯೋಜನೆಗಳನ್ನು ರೂಪಿಸಿ ಶೇಕಡ 95ರಷ್ಟು ಅನುದಾನವನ್ನು ಪ್ರಾಧಿಕಾರದಿಂದ ಶೇಕಡ 5ರಷ್ಟು ಅನುದಾನವನ್ನು ಸಂಬಂಧಪಟ್ಟ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಂದ ಭರಿಸಲು ಅವಕಾಶ ಕಲ್ಪಿಸಲಾಗಿತ್ತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸದಸ್ಯರಾಗಿರುವವರು ಹಾಗೂ ಅಧಿಕಾರಿಗಳು ಮಾತ್ರ ಕ್ರಿಯಾಯೋಜನೆ ರೂಪಿಸುತ್ತಿದ್ದ ಕಾರಣ ಚುನಾಯಿತ ಜನಪ್ರತಿನಿಧಿಗಳೆಲ್ಲರಿಗೂ ಅಧಿಕಾರ, ಅನುದಾನ ಹಾಗೂ ಮಾಹಿತಿ ಲಭ್ಯವಾಗದೇ ಇರುವ ಹಿನ್ನೆಲೆಯಲ್ಲಿ ಚುನಾಯಿತ ಎಲ್ಲಾ ಶಾಸಕರಿಗೂ ಅಧಿಕಾರ ದೊರೆಯುವಂತೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪರಿವರ್ತಿಸಿ ಅಧಿನಿಯಮವನ್ನು ರಚಿಸಿ, ಕರ್ನಾಟಕ ರಾಜ್ಯ ಪತ್ರ ಸಂಖ್ಯೆ: ಸಂವ್ಯಶಾಇ 29 ಶಾಸನ 2023, ದಿನಾಂಕ: 10.06.2024ರಲ್ಲಿ ಹೊರಡಿಸಲಾಗಿದೆ. ಸದರಿ ಕಾಯ್ದೆ ಪ್ರಕಾರ ಮಂಡಳಿ ವ್ಯಾಪ್ತಿಯ ಎಲ್ಲಾ ಚುನಾವಣೆ ಕ್ಷೇತ್ರಗಳನ್ನು ಹೊಂದಿರುವ ಸಂಸತ್ತಿನ ರಾಜ್ಯ ವಿಧಾನ ಸಭೆಯ ಸದಸ್ಯರು ಹಾಗೂ ಮಂಡಳಿ ವ್ಯಾಪ್ತಿಯಲ್ಲಿ ನೋಡಲ್ ಜಿಲ್ಲೆ/ತಾಲ್ಲೂಕನ್ನು ಹೊಂದಿರುವ ರಾಜ್ಯ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರುಗಳು, ನಾಮ ನಿರ್ದೇಶನಗೊಂಡ 10 ಮಂದಿ ಸದಸ್ಯರಾಗಿದ್ದು, ಯೋಜನೆಗಳನ್ನು ರೂಪಿಸಲು ಅವಕಾಶ ಕಲ್ಪಿಸಲಾಗಿದೆ.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧಿನಿಯಮ 2023 ದಿನಾಂಕ: 10.06.2024ರಲ್ಲಿ ರಾಜ್ಯ ಪತ್ರದಲ್ಲಿ ಪ್ರಕಟವಾದ ಕಾರಣ ಆರ್ಥಿಕ ವರ್ಷದ ಮಧ್ಯಭಾಗವಾದ ಕಾರಣ ಅಧಿಕೃತವಾಗಿ ದಿನಾಂಕ: 01.04.2025 ರಿಂದ ಪ್ರಾಧಿಕಾರದ ಬದಲು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ರಾಜ್ಯ ಸರ್ಕಾರವು12.52 ರೂ. ಕೋಟಿಗಳನ್ನು ನಿಗದಿಪಡಿಸಿದ್ದು, 2026-27ನೇ ಸಾಲಿನಿಂದ ಹೆಚ್ಚಿನ ಅನುದಾನವನ್ನು ನಿಗದಿಪಡಿಸಲು ಕ್ರಮವಹಿಸಲಾಗುತ್ತದೆ. ಹೀಗೆ ನಿಗದಿಪಡಿಸಿದ ಅನುದಾನಕ್ಕೆ ಕರಾವಳಿ ಭಾಗದ ಎಲ್ಲಾ ಜನಪ್ರತಿನಿಧಿಗಳು ಮಂಡಳಿಯ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ರೂಪಿಸಬಹುದಾಗಿರುತ್ತದೆ. ಹಿಂದೆ ಪ್ರಾಧಿಕಾರದಲ್ಲಿ ಈ ಅವಕಾಶವಿರಲಿಲ್ಲ ಎಂಬ ಅಂಶವನ್ನು ಸಚಿವರು ತಮ್ಮ ಉತ್ತರದಲ್ಲಿ ವಿವರಿಸಿದ್ದಾರೆ.