ದಿನನಿತ್ಯದ ಆಹಾರದ ಪದ್ದತಿಯಲ್ಲಿ ಮೀನಿನ ಬಳಕೆ ಅತೀ ಮುಖ್ಯ: ಡಾ. ಕೆ.ಸಿ. ವೀರಣ್ಣ
ಅವರು ನ.27 ರಂದು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ಅಂಗಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಅಧೀನದಲ್ಲಿರುವ, ಹೊಯ್ಗೆಬಜಾರ್ ಆವರಣದಲ್ಲಿರುವ ‘ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್’ನ ಪ್ರಾಯೋಜಿತ ಯೋಜನೆಯಡಿ ನಿರ್ಮಿಸಲ್ಪಟ್ಟ ‘ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ’ದ ವತಿಯಿಂದ ‘ಅಕ್ವೇರಿಯಂ ತಯಾರಿಕೆ, ನಿರ್ವಹಣೆ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಸಾಕಣೆ’ ಎಂಬ ಶಿರ್ಷಿಕೆಯಲ್ಲಿ 6 ದಿನಗಳ ಕಾಲ ನಡೆಸಲಾಗುವ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೇಡಿಕೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಮೀನಿನ ಸೇವನೆ ಅತ್ಯಮೂಲ್ಯವಾದುದು ಮತ್ತು ಧೀರ್ಘ ಕಾಲ ಜೀವಿಸಲು ಸಹಕಾರಿಯಾಗಿದೆ ಎಂದ ಅವರು ಅಲಂಕಾರಿಕಾ ಮೀನಿನ ಸಾಕಣೆ ಒಂದು ಬೃಹತ್ ಉದ್ಯಮವಾಗಿದ್ದು, ಯುವಪೀಳಿಗೆಗಳು ಹೆಚ್ಚು ಆಸಕ್ತಿ ತೋರಿಸಬೇಕು. ಅಕ್ವೇರಿಯಂಗಳಲ್ಲಿ ಬಣ್ಣಬಣ್ಣದ ಮೀನಿಗಳನ್ನು ಪೊಷಣೆ ಮಾಡುವುದು ಒಂದು ಹವ್ಯಾಸವಾಗಿ ಬೆಳೆಸಿಕೊಳ್ಳಬಹುದಾದ ಉದ್ದಿಮೆಯಾಗಬೇಕು ಎಂದರು.
ಮುಖ್ಯ ಅತಿಥಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಅರುಣ್ ಪ್ರಭಾ ಕೆ.ಎಸ್. ಮಾತನಾಡಿ, ಈ ತರಬೇತಿ ಕೇಂದ್ರವು ದ.ಕ. ಜಿಲ್ಲೆ ಮಾತ್ರವಲ್ಲದೇ ಇತರೆ ಜಿಲ್ಲೆಗಳ ಆಸಕ್ತ ಯುವಕ-ಯುವತಿಯರಿಗೂ ಸಹಾ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಕೊಡುವುದರ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಮೀನುಗಾರಿಕೆಯಲ್ಲಿ ಕೌಶಲ್ಯಾಬಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇದ್ರದ ಸಂಯೋಜಕ ಹಾಗೂ ಮೀನುಗಾರಿಕಾ ಕಾಲೇಜಿನ ಪ್ರೊಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ಮಾತನಾಡಿ, ಅಕ್ವೇರಿಯಂಗಳನ್ನು ಮನೆಗಳಲ್ಲಿ ಇಟ್ಟರೆ ಮಾನವನಿಗೆ ಬರುವ ಸಹಜವಾದ ಮಾನಸಿಕ ರೋಗಗಳನ್ನು ನಿವಾರಿಸಲು ಸಹಕಾರಿ ಮತ್ತು ಬಣ್ಣಬಣ್ಣದ ಮೀನುಗಳ ಚಲನವಲನಗಳನ್ನು ಅಕ್ವೇರಿಯಂಗಳಲ್ಲಿ ವೀಕ್ಷಿಸಿದರೆ ದಣಿದು ಬಂದ ಜೀವಕ್ಕೆ ಹುಮ್ಮಸ್ಸು ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಮನಸ್ಸಿಗೆ ಆನಂದವನ್ನೂ ಸಹ ಕೊಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಹೆಚ್.ಎನ್. ಅಂಜನೇಯಪ್ಪ ಮಾತನಾಡಿ, ಈ ಕೇಂದ್ರವು ನಿರುದ್ಯೋಗಿ ಯುವಕ-ಯುವತಿಯರು, ಯುವ ಉದ್ಯಮಿಗಳು, ವಿಸ್ತರಣಾ ಕಾರ್ಯಕರ್ತರು, ಸ್ವ-ಉದ್ಯೋಗಾಂಕ್ಷಿ ಯುವಕರು ಹಾಗೂ ಮೀನುಗಾರರು ಮತ್ತು ಕೃಷಿಕರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಮೀನುಗಾರಿಕಾ ಕಾಲೇಜಿನ ವಿಭಾಗ ಮುಖ್ಯಸ್ಥ ಡಾ. ಎಸ್. ವರದರಾಜು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಹಾಯಕ ಅಭಿಯಂತರ ಅನಂತ್ ಎಸ್. ಶಂಕರ್, ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ತರಬೇತಿಗೆ ಆಗಮಿಸಿದ ಒಟ್ಟು 30 ಶಿಬಿರಾರ್ಥಿಗಳು ಉಪಸ್ಥಿತರಿದ್ದರು.