ಸಿಪಿಐಎಂ ಪ್ರತಿಭಟನೆಗೆ ಮೀನುಗಾರರ ಬೆಂಬಲ ಇಲ್ಲ: ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುತ್ತೇವೆ
ಮಂಗಳೂರು: ಮೀನುಗಾರರ ಸಮಸ್ಯೆಗೆ ಪರಿಹಾರ ನೀಡುವ ಹೆಸರಿನಲ್ಲಿ ಸಿಪಿಐಎಂ ಪಕ್ಷವು ಡಿ.8ರಂದು ನಗರದಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಮೀನುಗಾರರದ್ದೇ ಸಂಘಟನೆಗಳಿವೆ. ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುತ್ತೇವೆ. ಸಿಪಿಐಎಂ ಪಕ್ಷದ ಪ್ರತಿಭಟನೆಗೆ ಮೀನುಗಾರರ ಬೆಂಬಲ ಇಲ್ಲ ಎಂದು ಮೀನುಗಾರರ ವಿವಿಧ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.
ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಮೀನುಗಾರರಿಗೆ ಸಹಾಯ ಮಾಡುತ್ತಾ ಬಂದಿದೆ. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಈವರೆಗೆ ಸ್ಥಗಿತಗೊಂಡಿರುವ ಕಾಮಗಾರಿಗಳನ್ನು ಈಗಿನ ಸರ್ಕಾರ ಮುತುವರ್ಜಿ ವಹಿಸಿ ಮಾಡುತ್ತಿದೆ. ಈಗಾಗಲೇ ಬಂದರಿನ 1 ಮತ್ತು 2ನೇ ಹಂತದ ಕಾಮಗಾರಿಗೆ 37.50 ಕೋಟಿ ರೂ. ಹಾಗೂ 3ನೇ ಹಂತದ ಕಾಮಗಾರಿಗೆ 49.50 ಕೋಟಿ ರೂ. ಮಂಜೂರು ಮಾಡಿದ್ದು, ಕೆಲಸ ಮುಂದುವರಿದಿದೆ. ಅಲ್ಲದೆ ದೇಶದ ಯಾವುದೇ ರಾಜ್ಯದಲ್ಲಿ ನೀಡದ ಕರ ರಹಿತ ಡೀಸೆಲ್‌ನ್ನು ಸರ್ಕಾರ ನೀಡುತ್ತಿದ್ದು, ಮೀನುಗಾರರಿಗೆ ದೊಡ್ಡ ಸಹಾಯ ದೊರೆತಿದೆ. ಆದ್ದರಿಂದ ಮೀನುಗಾರರ ವಿಚಾರದಲ್ಲಿ ರಾಜಕೀಯ ಪಕ್ಷವೊಂದು ಮೂಗು ತೂರಿಸಿ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಮಿಳುನಾಡು ಮತ್ತು ಕೇರಳದಲ್ಲಿ ಕರ್ನಾಟಕದ ಮೀನುಗಾರರಿಗೆ ತೀವ್ರ ಸಮಸ್ಯೆ ಎದುರಾದಾಗ ಸಿಎಂಐಎಂ ಪಕ್ಷದವರು ಎಲ್ಲಿದ್ದರು? ಕೊರೋನಾ ಸಂದರ್ಭದಲ್ಲಿ ಮೀನುಗಾರರಿಗೆ ಅವರ ಕೊಡುಗೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಸಿಪಿಎಂ ಪ್ರತಿಭಟನೆಗೆ ಯಾವುದೇ ಮೀನುಗಾರ ಸಂಘಟನೆಗಳು, ಮೀನುಗಾರರು ಕೈಜೋಡಿಸುವುದಿಲ್ಲ ಎಂದರು.
ಕರ್ನಾಟಕ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಟ್ರಾಲ್‌ಬೋಟ್ ಮೀನುಗಾರರ ಸಂಘದ ಉಪಾಧ್ಯಕ್ಷ ಇಬ್ರಾಹಿಂ ಬೆಂಗ್ರೆ, ಮಾಜಿ ಅಧ್ಯಕ್ಷ ಮೋಹನ್ ಬೆಂಗ್ರೆ, ಕಾರ್ಯದರ್ಶಿ ರಾಜೇಶ್ ಪುತ್ರನ್, ಹರೀಶ್ಚಂದ್ರ ಬೆಂಗ್ರೆ ಉಪಸ್ಥಿತರಿದ್ದರು.
ಕರ್ನಾಟಕದ ಮೀನುಗಾರರ ಬೋಟ್‌ಗಳನ್ನು ಕೇರಳದ ಸಮುದ್ರಭಾಗದಲ್ಲಿ ಹಿಡಿದು ಲಕ್ಷಾಂತರ ದಂಡ ವಿಧಿಸಲಾಗುತ್ತಿದೆ. ಕೇರಳದಲ್ಲಿ ಸಿಪಿಐಎಂ ಆಡಳಿತ ನಡೆಸುತ್ತಿದೆ. ಮಂಗಳೂರಿನಲ್ಲಿ ಪ್ರತಿಭಟನೆಗೆ ಮುಂದಾಗಿರುವ ಸಿಪಿಐಎಂ ಪಕ್ಷ ಕೇರಳದಲ್ಲಿ ಕರ್ನಾಟಕದ ಮೀನುಗಾರರ ಮೇಲೆ ದಂಡ ವಿಧಿಸುತ್ತಿರುವುದನ್ನು ಮೊದಲು ತಡೆಯಲಿ ಎಂದು ಚೇತನ್ ಬೆಂಗ್ರೆ ಹೇಳಿದರು.