ಡಿ.4 ರಂದು ‘ಜೈ ಹನುಮಾನ್’ ಸಿನಿ ನಾಟಕ ಪ್ರದರ್ಶನ

ಡಿ.4 ರಂದು ‘ಜೈ ಹನುಮಾನ್’ ಸಿನಿ ನಾಟಕ ಪ್ರದರ್ಶನ

ಮಂಗಳೂರು: ಕಳೆದ 16 ವರ್ಷಗಳಿಂದ ಅನೇಕ ಹಾಸ್ಯಮಯ, ಸಾಂಸಾರಿಕ, ಐತಿಹಾಸಿಕ, ಜಾನಪದ, ಭಕ್ತಿ ಪ್ರಧಾನ ನಾಟಕಗಳನ್ನು ನೀಡಿದ ವಿಧಾತ್ರೀ ಕಲಾವಿದೆರ್ ಕುಡ್ಲ ತಂಡವು ಈ ವರ್ಷ ಹನುಮಂತನ ವೀರಗಾಥೆಯನ್ನು ಬಿಂಬಿಸುವ ‘ಜೈ ಹನುಮಾನ್’ ಸಿನಿ ನಾಟಕವನ್ನು ನಿರ್ಮಿಸಿದೆ. ನಾಟಕದ ಪ್ರಥಮ ಪ್ರದರ್ಶನ ಡಿ.4ರಂದು ಸಂಜೆ 5 ಗಂಟೆಗೆ ನಗರದ ಪುರಭವನದಲ್ಲಿ ನಡೆಯಲಿದೆ.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ನಾಟಕದ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಭಕ್ತಿಯ ಆಳ ಮತ್ತು ಧರ್ಮ ರಕ್ಷಣೆಯ ಸಂದೇಶವನ್ನು ರಂಗದ ಮೇಲೆ ಅನಾವರಣಗೊಳಿಸುವ ನಿಟ್ಟಿನಲ್ಲಿ ಬಹುರಾಮಾಯಣದ ಕಥೆಯನ್ನು ಆಧರಿಸಿ ಈ ನಾಟಕ ರಚಿಸಲಾಗಿದೆ. 18 ಲಕ್ಷ ರೂ. ವೆಚ್ಚದಲ್ಲಿ ಮೂಡಿಬಂದಿರುವ ವಿಭಿನ್ನ ಶೈಲಿಯ ಈ ಸಿನಿ ನಾಟಕವು ತುಳು ಮತ್ತು ಕನ್ನಡದಲ್ಲಿ ಆಧುನಿಕ ರಂಗ ವಿನ್ಯಾಸದೊಂದಿಗೆ, ವಿಶಿಷ್ಠ ಬೆಳಕಿನ ಸಂಯೋಜನೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಮೂಡಿಬರಲಿದೆ ಎಂದು ತಂಡದ ವ್ಯವಸ್ಥಾಪಕ ಚಿದಾನಂದ ಅದ್ಯಪಾಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ರಂಗಕರ್ಮಿ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಅವರು ನಾಟಕವನ್ನು ನಿರ್ದೇಶಿಸಿದ್ದು, ಡಾ. ದೇವದಾಸ್ ಕಾಪಿಕಾಡ್ ಅವರು ಹಾಡಿದ ರಾಮಸೇತು ನಿರ್ಮಾಣದ ಮತ್ತು ಶ್ರೀರಾಮ- ಹನುಮರ ಅಪ್ಪುಗೆಯ ಹಾಡು ಕಲಾಪ್ರೇಮಿಗಳನ್ನು ಸೆಳೆಯಲಿದೆ. ಗಾಯಕರಾದ ರವೀಂದ್ರ ಪ್ರಭು, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ವೇಣೂರು, ಚಲನಚಿತ್ರ ನಟ ರಕ್ಷಣ್ ಮಾಡೂರು, ಸಂಗೀತಾ ಭಟ್, ಮಲ್ಲಿಕಾ ಮಟ್ಟಿ, ಮಹಿಮಾ ಭಂಡಾರಿ ಅವರು ಶಶಿರಾಜ್ ಕಾವೂರು, ಸಂದೀಪ್ ಉಡುಪಿ, ದೀಪಕ್ ಚೇಳಾರ್, ನವೀನ್ ಸುವರ್ಣ ಪಡ್ರೆ ರಚಿಸಿದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಶೀರ್ಷಿಕೆ ಗೀತೆ ಹಾಗೂ ಮತ್ತೊಂದು ವಿಭಿನ್ನ ಗೀತೆಗೆ ಮುಂಬೈನ ಪುರಾನ್ ಶೆಟ್ಟಿಗಾರ್ ಸಂಗೀತ ಸಂಯೋಜನೆ ಮಾಡಿದ್ದು, ಗುರು ಬಾಯಾರ್ ಹಿನ್ನೆಲೆ ಸಂಗೀತ ನಿದೇರ್ಶನ ಮಾಡಿದ್ದಾರೆ. ಸಾಯಿರಾಮ್ ಸ್ಟುಡಿಯೋದಲ್ಲಿ ಧ್ವನಿ ಮುದ್ರಣಗೊಂಡ ಈ ನಾಟಕವನ್ನು ಭರತ್ ಎಸ್. ಕರ್ಕೇರ ಮತ್ತು ವಿಧಾತ್ರೀ ತಂಡ ರಚಿಸಿದೆ ಎಂದು ವಿವರಿಸಿದರು.

ನಾಟಕದುದ್ದಕ್ಕೂ ಮೈರೋಮಾಂಚನಗೊಳಿಸುವ ಸನ್ನಿವೇಶಗಳಿದ್ದು, ಹನುಮಂತನ ಪ್ರವೇಶ, ಅಪ್ಸರೆಯ ಮನಮೋಹಕ ನೃತ್ಯ, ಲಂಕಿಣಿಯ ವಿಭಿನ್ನ ನೃತ್ಯ, ಭದ್ರಕಾಳಿಯ ರೌದ್ರತೆ ಪ್ರೇಕ್ಷಕರನ್ನು ಬೆರಗುಗೊಳಿಸಲಿದೆ. ಈ ನಾಟಕವನ್ನು ಹಿಂದೂ ಯುವಸೇನೆ ಕೊಡಿಯಾಲ್‌ಬೈಲ್ ಘಟಕ ಪ್ರಾಯೋಜಿಸಿದ್ದು, ಮೊದಲ ಪ್ರದರ್ಶನ ಉಚಿತವಾಗಿದೆ ಎಂದರು.

ಹಿಂದೂ ಯುವ ಸೇನೆ ಕೊಡಿಯಾಲಬೈಲ್ ಶಾಖೆಯ ಸಂಸ್ಥಾಪಕ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಪ್ರಮುಖರಾದ ಪ್ರವೀಣ್ ಕುಂಪಲ, ರಾಜೇಶ್, ಟೀಪೇಶ್ ಅಮೀನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article