ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ‌ ಆಗ್ರಹಿಸಿ ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯಿಂದ ಬೃಹತ್ ರ‌್ಯಾಲಿ

ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆ: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ‌ ಆಗ್ರಹಿಸಿ ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯಿಂದ ಬೃಹತ್ ರ‌್ಯಾಲಿ

ಜನರ ಬದುಕಿನ ಕುರಿತು ಚಿಂತಿಸದ ಬಿಜೆಪಿ, ಕಾಂಗ್ರೆಸ್ ನಾಯಕರು ಪರಸ್ಪರ ಸ್ಪರ್ಧೆಗೆ ಬಿದ್ದು ವೈಭವದ ಕಂಬಳ, ಹುಲಿ ಕುಣಿತ ಆಯೋಜಿಸುತ್ತಿದ್ದಾರೆ: ಮುನೀರ್ ಕಾಟಿಪಳ್ಳ ಆರೋಪ


ಮಂಗಳೂರು: ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸಹಿತ ದ.ಕ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕು, ಅಭಿವೃದ್ದಿಯ ಫಲ ಜನಸಾಮಾನ್ಯರಿಗೂ ತಲುಪುವಂತೆ ಯೋಜನೆಗಳನ್ನು ರೂಪಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ವತಿಯಿಂದ 'ಜನ ಸಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ, ಘೋಷಣೆಯ ಅಡಿಯಲ್ಲಿ ಅಂಬೆಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದ ವರಗೆ ಬೃಹತ್ ಮೆರವಣಿಗೆ ಹಾಗು ಬಹಿರಂಗ ಸಭೆ ನಡೆಯಿತು. ಮೆರವಣಿಗೆಯಲ್ಲಿ‌ ಸಾವಿರಾರು ಸಂಖ್ಯೆಯಲ್ಲಿ ಸಿಪಿಐಎಂ ಕಾರ್ಯಕರ್ತರು ಭಾಗವಹಿಸಿ ಗಮನ ಸೆಳೆದರು.


ಬಹಿರಂಗ ಸಭೆಯನ್ನು‌ ಸಿಪಿಐಎಂ ಜಿಲ್ಲಾ‌ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಉದ್ಘಾಟಿಸಿ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಅಭಿವೃದ್ದಿಯಲ್ಲಿ ಜನ ಸಾಮಾನ್ಯರು‌, ಕಾರ್ಮಿಕರು, ದಲಿತರು, ಆದಿವಾಸಿಗಳನ್ನು ಹೊರಗಿಡಲಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳು, ಕಾರ್ಪೊರೇಟ್ ಆಸ್ಪತ್ರೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಲಾಭಿಗಳು ಜಿಲ್ಲೆಯ ರಾಜಕಾರಣದ ಮೇಲೆ ಪೂರ್ತಿ ಹಿಡಿತ ಸಾಧಿಸಿವೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಲಾಭಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. 


ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಖಾಸಗೀಕರಣದಿಂದ ಜನ ಸಾಮಾನ್ಯರು ಆರೋಗ್ಯ, ಶಿಕ್ಷಣ ಸೇವೆಯಿಂದ ವಂಚಿತರಾಗುವ ಸ್ಥಿತಿ ಉಂಟಾಗಿದೆ. ಸರಕಾರಿ ಕ್ಯಾನ್ಸರ್, ಹೃದಯದ ಆಸ್ಪತ್ರೆಗಳಾದ  ಕಿದ್ವಾಯಿ, ಜಯದೇವ ಆಸ್ಪತ್ರೆಯ ಘಟಕಗಳು ಮಂಗಳೂರಿಗೆ ಮರೀಚಿಕೆಯಾಗಿ ಉಳಿದಿದೆ. ವೆನ್ಲಾಕ್ ಸಹಿತ ಸರಕಾರಿ ಆಸ್ಪತ್ರೆಗಳು ಖಾಸಗಿ ಮೆಡಿಕಲ್ ಕಾಲೇಜುಗಳ ಪಾಲಾಗುತ್ತಿವೆ ಎಂದು ವಿಷಾದಿಸಿದರು. ಉದ್ಯೋಗ ವಂಚಿತ ವಿದ್ಯಾವಂತ ಯುವಜ‌ನತೆ ಬೇರೆ ದಾರಿಕಾಣದೆ ಪ್ರತಿ ಮನೆಯಿಂದಲೂ ಬೆಂಗಳೂರು, ಮುಂಬೈ, ಗಲ್ಫ್ ರಾಷ್ಟ್ರಗಳತ್ತ ವಲಸೆ ಹೋಗುತ್ತಿದ್ದಾರೆ, ಅಲ್ಲಿ ಅತಂತ್ರ ಬದುಕು ಕಾಣುತ್ತಿದ್ದಾರೆ, ಅಂತವರ ಕುರಿತು ಜಿಲ್ಲೆಯ ರಾಜಕಾರಣಿಗಳು ಸೊಲ್ಲೆತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ಜಿಲ್ಲೆಯ ಇಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಚಿಂತಿಸಬೇಕಾದ ಬಿಜೆಪಿಯ ಶಾಸಕರುಗಳು ಕಂಬಳ, ಹುಲಿ ಕುಣಿತ, ದೋಸೆ ಹಬ್ಬ, ಆಹಾರ ಮೇಳ ಎಂದು ಆಡಂಬರದ ಉತ್ಸವಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲೆಯ ವಿರೋಧ ಪಕ್ಷ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿಗಳು ಶಾಸಕರುಗಳ ವೈಫಲ್ಯಗಳ ವಿರುದ್ದ ಜನತೆಗೆ ಧ್ವನಿಯಾಗುವ ಬದಲಿಗೆ ಕಂಬಳ, ಹುಲಿಕುಣಿತಗಳನ್ನು‌ ಆಯೋಜಿಸುವುದರಲ್ಲಿ ಬಿಜೆಪಿಯೊಂದಿಗೆ ಸ್ಪರ್ಧೆಗೆ ಬಿದ್ದಿದ್ದಾರೆ ಎಂದು ಆರೋಪಿಸಿದರು.


ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಜಿಲ್ಲೆಯಲ್ಲಿ ವಸತಿ ರಹಿತರಿಗೆ ಮನೆ ನಿವೇಶನ ನೀಡದೆ ಎರಡು ದಶಕ ದಾಟಿದೆ, ನಗರ ಪಾಲಿಕೆಯಲ್ಲಿ ಮನೆ ರಹಿತ ಬಡವರಿಗೆ ಹಕ್ಕು ಪತ್ರ ನೀಡಿ ಎಂಟು ವರ್ಷಗಳಾದರು ವಸತಿ ಯೋಜನೆಗೆ ಅಡಿಗಲ್ಲು ಹಾಕುವ ಕಾರ್ಯವೂ ನಡೆದಿಲ್ಲ, ಮಂಗಳೂರು ಎನ್ನುವುದು ರಿಯಲ್ ಎಸ್ಟೇಟ್, ಟಿಡಿಆರ್ ದಂಧೆಕೋರರ ಪಾಲಿಗೆ ಸ್ವರ್ಗವಾಗಿ  ಮಾರ್ಪಟ್ಟಿದೆ. ಕರಾವಳಿ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಮಂಗಳೂರಿನ ಮೀನುಗಾರಿಕಾ ಧಕ್ಕೆಯಂತು ಗಬ್ಬು‌ನಾರುತ್ತಿದೆ, ಇಲ್ಲಿ ಮೀನುಗಾರರು, ವ್ಯಾಪಾರಿಗಳು, ಕಾರ್ಮಿಕರನ್ನು ಆಳುವ ಸರಕಾರಗಳು ನಿಕೃಷ್ಟವಾಗಿ ಕಾಣುತ್ತಿದೆ, ಮೀನುಗಾರ ಸಮಸ್ಯೆಗಳನ್ನು ಇಲ್ಲಿ ಕೇಳುವವರೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮತ್ತೋರ್ವ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡುತ್ತಾ, ಜಿಲ್ಲೆಯ ಜನಸಂಖ್ಯೆಯಲ್ಲಿ ಹದಿನಾರು ಪ್ರತಿಶತ ಇರುವ ಆದಿವಾಸಿಗಳು, ಅರಣ್ಯವಾಸಿಗಳು, ದಲಿತರು, ಅಲೆಮಾರಿ ಸಮುದಾಯಗಳನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಪೂರ್ತಿ ಕಡೆಗಣಿಸಿದ್ದಾರೆ, ಯಾವುದೇ ಅಭಿವೃದ್ದಿ ಕಾರ್ಯಗಳು, ಯೋಜನೆಗಳಲ್ಲಿ ಈ ಸಮುದಾಯಗಳನ್ನು ಒಳಗೊಳಿಸುವುದಿಲ್ಲ ಎಂದು ಹೇಳಿದರು.

ಸಿಪಿಐಎಂ ಜಿಲ್ಲಾ ಮುಖಂಡರುಗಳಾದ ಬಿ.ಎಮ್. ಭಟ್, ವಸಂತ ಆಚಾರಿ, ಜಯಂತಿ ಶೆಟ್ಟಿ, ಸುಕುಮಾರ್, ಸದಾಶಿವ ದಾಸ್ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು.‌

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article