ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ: ಪೋಕ್ಸೋ ಆರೋಪಿ ಬಂಧನ
ಮಂಗಳೂರು: ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯನ್ನು ಕಾಮುಕನೊಬ್ಬ ಜೇನು ಕೃಷಿ ಕಲಿಸುವ ನೆಪದಲ್ಲಿ ಎರಡು ವಾರಕ್ಕಿಂತಲೂ ಹೆಚ್ಚು ಸಮಯ ನಿರಂತರವಾಗಿ ಅತ್ಯಾಚಾರ ಮಾಡಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಮೂಲದ ಮಹಿಳೆಯು ತನ್ನ ಗಂಡ ಹಾಗೂ ಅಪ್ರಾಪ್ತ ಪ್ರಾಯದ ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಸ್ಥಳೀಯ ನಿವಾಸಿ ಅಬ್ದುಲ್ ಗಫೂರ್ ಎಂಬಾತ ಅಪ್ರಾಪ್ತ ಮಗಳಿಗೆ ಜೇನು ಕೃಷಿ ಕಲಿಸುವ ಭರವಸೆ ನೀಡಿದ್ದಾನೆ. ಈತನ ಮಾತು ನಂಬಿದ ದಂಪತಿ ತಮ್ಮ ಅಪ್ರಾಪ್ತ ಪುತ್ರಿಯನ್ನು ಅಬ್ದುಲ್ ಗಫೂರ್ ಮನೆಯಲ್ಲಿ ಬಿಟ್ಟು ತಮ್ಮ ಊರಿಗೆ ತೆರಳಿದ್ದಾರೆ. 2025 ಡಿಸೆಂಬರ್20 ರಂದು ಊರಿನಿಂದ ಮರಳಿ ಬಂದ ದಂಪತಿ ಜೊತೆ ಅಪ್ರಾಪ್ತ ಪುತ್ರಿ ತನ್ನ ಮೇಲಿನ ದೌರ್ಜನ್ಯ ಬಗ್ಗೆ ಕಣ್ಣೀರಿಟ್ಟು ವಿವರಿಸಿದ್ದಾಳೆಂದು ದೂರಿನಲ್ಲಿ ವಿವರಿಸಲಾಗಿದೆ.
2025 ಡಿಸೆಂಬರ್೨ ರಿಂದ ಆರೋಪಿ ಅಬ್ದುಲ್ ಗಫೂರ್ ಅಪ್ರಾಪ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಬಗ್ಗೆ ಪೋಷಕರು ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅ. ಕ್ರ 118/2025, ಕಲಂ: 115(2),351(2),65(1) BNS-2023 4,6 ಪೋಕ್ಸೋ ಕಾಯ್ದೆ 2012 ಪ್ರಕರಣ ದಾಖಲಾಗಿದೆ.
ಆರೋಪಿ ಅಬ್ದುಲ್ ಗಫೂರ್‌ನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.