ಪುತ್ತೂರು: ಪುತ್ತೂರು ತಾಲ್ಲೂಕಿನ ವಿಟ್ಲದ ಕೇಪು ಪ್ರದೇಶದಲ್ಲಿ ಸುಮಾರು 800 ವರ್ಷಗಳಿಂದ ಶಿಸ್ತುಬದ್ಧವಾಗಿ, ಯಾವುದೇ ಜೂಜು ಅಥವಾ ಅಕ್ರಮವಿಲ್ಲದೆ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಕೋಳಿ ಸೇವೆ ಕರಾವಳಿ ಭಾಗದ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಈ ಆಚರಣೆ ಶುದ್ಧವಾಗಿ ಧಾರ್ಮಿಕ ನಂಬಿಕೆ ಮತ್ತು ಸಂಸ್ಕೃತಿಯ ಭಾಗವಾಗಿದ್ದು, ಇದುವರೆಗೂ ಯಾವುದೇ ಸಾರ್ವಜನಿಕ ಅಶಾಂತಿಗೆ ಕಾರಣವಾಗಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಅವರು ಇಂದು ಬಿಜೆಪಿ ಪ್ರಮುಖರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಕಾಂಗ್ರೆಸ್ ಸರ್ಕಾರ ಅನಗತ್ಯ ಹಸ್ತಕ್ಷೇಪ ನಡೆಸಿ, ಪೊಲೀಸರ ಮೂಲಕ ಈ ಪುರಾತನ ಆಚರಣೆಗೆ ತಡೆ ತಂದಿರುವುದು ಕರಾವಳಿ ಜನರ ಧಾರ್ಮಿಕ ಭಾವನೆಗಳ ಮೇಲಿನ ನೇರ ದಾಳಿಯಾಗಿದೆ ಎಂದು ಖಂಡಿಸಿದರು. ಈ ಪ್ರದೇಶದ ಸ್ವತಃ ಕಾಂಗ್ರೆಸ್ ಶಾಸಕರು ಜನರ ಧಾರ್ಮಿಕ ನಂಬಿಕೆಗಳನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸ್ಥಳೀಯ ಶಾಸಕರು ಇದ್ದರೂ, ಶತಮಾನಗಳಿಂದ ನಡೆದುಕೊಂಡು ಬಂದ ಸಾಂಪ್ರದಾಯಿಕ ಆಚರಣೆಯನ್ನು ಮುಂದುವರಿಸಲು ಸಾಧ್ಯವಾಗದಿರುವುದು ಅತೀವ ಬೇಸರದ ಸಂಗತಿ ಎಂದರು.
ಸರ್ಕಾರದ ಸೂಚನೆಯ ಮೇರೆಗೆ ಪೊಲೀಸರು ಸಾಂಪ್ರದಾಯಿಕ ಕೋಳಿ ಸೇವೆಗೆ ತಡೆ ತಂದಿರುವುದು, ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಹಾಗೂ ಜನವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಧಾರ್ಮಿಕ ಆಚರಣೆಗಳ ವಿಷಯದಲ್ಲಿ ಒಂದೇ ಧರ್ಮವನ್ನು ಗುರಿಯಾಗಿಸಿ ನಿರಂತರ ಅಡ್ಡಿಪಡಿಸುವುದು ಸಹಿಸಲಾಗದ ಸಂಗತಿಯಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಅವರು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಪೊಲೀಸರೊಂದಿಗೆ ಚರ್ಚೆ ನಡೆಸಿ, ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಈ ಧಾರ್ಮಿಕ ಆಚರಣೆಯನ್ನು ಯಾವುದೇ ನಿರ್ಬಂಧವಿಲ್ಲದೆ ನಡೆಸಲು ಅವಕಾಶ ನೀಡಬೇಕೆಂದು ಸ್ಪಷ್ಟವಾಗಿ ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಕೋಳಿ ಸೇವೆಯನ್ನು ನಡೆಸಲು ಅವಕಾಶ ನೀಡದಿದ್ದರೆ, ಸ್ಥಳೀಯರು ಮತ್ತು ಸಾರ್ವಜನಿಕರೊಂದಿಗೆ ಸೇರಿ ತೀವ್ರವಾದ ಹೋರಾಟ ಮತ್ತು ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಕೂಡ ಅವರು ನೀಡಿದ್ದಾರೆ.
ಮಾಜಿ ಶಾಸಕರು ಸಂಜೀವ ಮಠದೂರ್, ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ಪಕ್ಷದ ಪ್ರಮುಖರಾದ ಪ್ರಸನ್ನ ಮಾರ್ತಾ, ಹರಿಪ್ರಸಾದ್, ಚೆನ್ನಿಲ ತಿಮ್ಮಪ್ಪ ಶೆಟ್ಟಿ, ಪುನೀತ್ ಮಾಡ್ತಾರು, ಶ್ರೀಕೃಷ್ಣ ವಿಟ್ಲ, ಶಶಿಧರ್ ನಾಯಕ್, ನಾಗೇಂದ್ರ, ಅಶೋಕ್ ಶೆಟ್ಟಿ ವಿಟ್ಲ, ರವೀಶ್ ವಿಟ್ಲ, ತಾರಾನಾಥ ಆಳ್ವ, ರಾಕೇಶ್ ಬಲ್ಲೆಕಳ್ಳು, ಮನೋರಾಜ್ ರೈ, ವಿಜಯ್ ಸಾಲಿಯನ್ ಕೇಪು, ಜಿಲ್ಲಾ ಮತ್ತು ಮಂಡಲದ ಪದಾಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.