ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬದಲಾವಣೆಗೆ ವಿರೋಧ: ವೆಲ್ಫೇರ್ ಪಾರ್ಟಿ
ಮಂಗಳೂರು: ನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿ ಕೇಂದ್ರ ಸರಕಾರ ಗಾಂಧಿಜೀ ವಿರುದ್ಧ ತನ್ನ ದ್ವೇಷ ಹೊರಹಾಕಿದಲ್ಲದೆ, ಬಡ ಕಾರ್ಮಿಕರಿಗೆ ಅನ್ಯಾಯ ಮಾಡಿದೆ ಇದು ದ್ವೇಷರಾಜಕಾರಣದ ಭಾಗ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 20 ವರ್ಷಗಳಿಂದ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಜೀವನಕ್ಕೆ ಭದ್ರತೆ ಒದಗಿಸಿದೆ. ಆದರೆ ಈಗಿನ ಕೇಂದ್ರ ಸರ್ಕಾರ ನಿನ್ನೆ ನಡೆದ ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರಿನಲ್ಲಿರುವ ಮಹಾತ್ಮಗಾಂಧಿ ಅವರ ಹೆಸರನ್ನು ತೆಗೆದುಹಾಕಿ ‘ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಯೋಜನೆ (ವಿಬಿ ಜಿ-ರಾಮ್-ಜಿ) ಎಂದು ಮರುನಾಮಕರಣ ಮಾಡಿ, ಮಹಾತ್ಮಗಾಂಧಿಯವರಿಗೆ ಅವಮಾನ ಮಾಡಿದೆ.
ಬಿಜಿಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕಾರ್ಪೋರೇಟ್ ಪರ ವರ್ತಿಸುತ್ತಾ, ದುಡಿಯುವ ವರ್ಗಗಳನ್ನು ತುಳಿಯುತ್ತಾ ಬರುತ್ತಿದೆ, ಅದರ ಭಾಗವಾಗಿಯೇ ಈ ಯೋಜನೆಯ ಹೆಸರು ಬದಲಾವಣೆ ಮಾಡಿರುವುದು ಮಾತ್ರವಲ್ಲದೇ ಈ ಯೋಜನೆಗೆ ರಾಜ್ಯ ಸರ್ಕಾರಗಳು ಕೂಡಾ ಶೇ.40 ರಷ್ಟು ಕೂಲಿ ಪಾವತಿಸಬೇಕೆಂದು ಮಸೂದೆ ಮಂಡನೆ ಮಾಡಿರುವುದು ತೀವ್ರ ಖಂಡನೀಯವಾಗಿದೆ.
ಈಗಾಗಲೇ ಎಲ್ಲಾ ರಾಜ್ಯ ಸರ್ಕಾರಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಜಿ.ಎಸ್.ಟಿ ಹೆಸರಿನಲ್ಲಿ ಕೇಂದ್ರ ಸರ್ಕಾರ ಇಡೀ ಹಣಕಾಸಿನ ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳಿಗೆ ಅನ್ಯಾಯವೆಸಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳು ಹಣಕಾಸಿನ ತೊಂದರೆ ಅನುಭವಿಸುತ್ತಿವೆ. ಈ ಬದಲಾವಣೆಯಿಂದ ಸುಮಾರು 1 ಕೋಟಿಗೂ ಅಧಿಕಾರ ಬಡ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ. ಕೇಂದ್ರ ಸರ್ಕಾರದ ಈ ಧೋರಣೆ ಅಮಾನವೀಯವಾಗಿದೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೇಂದ್ರ ಸರ್ಕಾರದ ಈ ನಡೆಗೆ ವಿರೋಧ ವ್ಯಕ್ತಪಡಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.