ಮುಡಾದಲ್ಲಿ ಟಿ.ಡಿ.ಆರ್ ದಂಧೆ
ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮತ್ತೆ ಟಿ.ಡಿ.ಆರ್ ದಂಧೆ ದೊಡ್ಡ ಮಟ್ಟದಲ್ಲಿ ಆರಂಭಗೊಂಡಿದೆ. ಎರಡು ವರ್ಷಗಳ ಹಿಂದೆ ಕೈಬಿಟ್ಟಿದ್ದ ಬಲಾಢ್ಯ ರಿಯಲ್ ಎಸ್ಟೇಟ್ ಲಾಬಿಯ ನಿಷ್ಪ್ರಯೋಜಕ ಜಮೀನನ್ನು ಟಿ.ಡಿ.ಆರ್ ಅಡಿಯಲ್ಲಿ ಖರೀದಿಸುವ ಪ್ರಸ್ತಾವವನ್ನು ಮುಡಾ ಅಂಗೀಕರಿಸಿರುವ ಮಾಹಿತಿ ಲಭ್ಯವಾಗಿದ್ದು, ಇದು ಮಹಾ ವಂಚನೆಯಾಗಿದೆ’ ಎಂದು ಸಿಪಿಎಂ ಆರೋಪಿಸಿದೆ.
ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದ ಸಮೀಪದಲ್ಲಿದ್ದ ಯಾರಿಗೂ ಬೇಡದ 10 ಎಕರೆ ನಿಷ್ಪ್ರಯೋಜಕ ಜಮೀನನ್ನು ಅಪಾರ ಬೆಲೆ ಬಾಳುವ ಟಿ.ಡಿ.ಆರ್ ನೀಡಿ ಖರೀದಿಸಲು ವರ್ಷದ ಹಿಂದೆ ತೀರ್ಮಾನಿಸಿದಾಗ ನಾಗರಿಕರು ವಿರೋಧಿಸಿದ್ದರು. ನಂತರ ಪ್ರಸ್ತಾವ ತಿರಸ್ಕೃತಗೊಂಡಿತ್ತು. ಈಗ ಪುನಃ ಈ ಜಮೀನನ್ನು ಟಿಡಿಆರ್ ಅಡಿಯಲ್ಲಿ ಖರೀದಿಸಲಾಗಿದ್ದು, ಜನರ ತೆರಿಗೆಯ ಹಣ ದುರುಪಯೋಗ ಆಗಿದೆ. ತ್ಯಾಜ್ಯ ವಿಲೇವಾರಿ ಘಟಕದ ವಿಸ್ತರಣೆಗೆ ಪಚ್ಚನಾಡಿಯಲ್ಲಿ ನಗರ ಪಾಲಿಕೆಯ ಒಡೆತನದ ವಿಶಾಲ ಜಮೀನು ಇದೆ. ಹಾಗಿರುವಾಗ ಯಾರಿಗೂ ಬೇಡದ ಖಾಸಗಿ ಜಮೀನಿನ ಮೇಲೆ ಆಸಕ್ತಿ ಯಾಕೆ’ ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ತ್ಯಾಜ್ಯ ವಿಲೇವಾರಿಗೆ ಜಮೀನು ಖರೀದಿ ಮಾಡುವುದಾದರೆ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಬೇಕು, ಇದನ್ನೂ ಪಾಲಿಸದೆ ಟಿಡಿಆರ್ ಅಡಿ ಖರೀದಿಸಿರುವುದು ಹೇಗೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.