ಕೋಳಿ ಅಂಕಕ್ಕೆ ದಾಳಿ ಮಾಡಿದ ಪೊಲೀಸರ ವಿರುದ್ಧ ಗರಂ ಆದ ಶಾಸಕ ರೈ
ವಿಟ್ಲ: ಸಾಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕಕ್ಕೆ ದಾಳಿ ಮಾಡಿದ ಪೊಲೀಸರ ವಿರುದ್ದ ಪುತ್ತೂರು ಶಾಸಕ ಅಶೋಕ್ ರೈ ಗರಂ ಆದ ಘಟನೆ ನಡೆದಿದೆ.
ವಿಟ್ಲದ ಕೇಪು ಉಳ್ಳಾಲ್ತಿ ಕ್ಷೇತ್ರದ ಪಕ್ಕದಲ್ಲಿ ಕೋಳಿ ಅಂಕ ನಡೆಯುತ್ತಿತ್ತು, ಈ ವೇಳೆ ಪೊಲೀಸರು ದಾಳಿ ನಡೆಸಿ ಕೋಳಿ ಅಂಕ ನಡೆಯದಂತೆ ತಡೆದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪುತ್ತೂರು ಶಾಸಕ ಅಶೋಕ್ ರೈ ದಾಳಿ ಮಾಡಿದ ಪೋಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಕ್ಷೇತ್ರದ ಸಂಪ್ರದಾಯದಂತೆ ಕೋಳಿ ಅಂಕ ನಡೆಯುತ್ತಿದ್ದು, ಇಲ್ಲಿ ಯಾವುದೇ ಜೂಜು ನಡೆಯುತ್ತಿಲ್ಲ, ನಂಬಿಕೆಯ ಆಧಾರದಲ್ಲಿ ಜನ ಕೋಳಿ ತಂದು ಕೋಳಿ ಅಂಕ ಮಾಡುತ್ತಿದ್ದಾರೆ. ಇಂದು ಸಂಖೆ 6 ಗಂಟೆ ತನಕ ಅವಕಾಶ ಕೊಡಿ ಎಂದರು. ಇಲ್ಲಿ ಪ್ರತಿವರ್ಷ ಮೂರು ದಿನ ಕೋಳಿ ಅಂಕ ಆಗುತ್ತದೆ, ಆದರೆ ಈ ಬಾರಿ ಒಂದು ದಿನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೋಳಿ ಅಂಕ ನಿಲ್ಲಿಸಬಾರದು. ನಾನೇ ಸ್ವತಹ ಇದ್ದು ಕೋಳಿ ಅಂಕ ನಡೆಸುತ್ತೇನೆ ಎಂದರು. ಪೊಲೀಸರ ಮೇಲೆ ಗರಂ ಆದ ಶಾಸಕ ಇಲ್ಲಿ ಕ್ರಿಕೆಟ್ ಬೆಟ್ಟಿಂಗ್, ಕುದುರೆ ರೇಸ್‌ನಲ್ಲಿ ಆದಂತೆ ಜೂಜು ಕಟ್ಟುವುದಿಲ್ಲ, ಎಲ್ಲಾ ಅಧಿಕಾರಿಗಳಿಗೆ ಮಾತನಾಡಿ ಕೋಳಿ ಅಂಕ ಮಾಡಲು ಅವಕಾಶ ನೀಡಿದ್ದೇನೆ, ಪ್ರಕರಣ ದಾಖಲಿಸುವುದಾದರೆ ಮೊದಲು ನನ್ನ ಮೇಲೆ ದಾಖಲಿಸಿ, ಆದರೆ ಕೋಳಿ ಅಂಕ ನಡೆದೇ ನಡೆಯುತ್ತದೆ ಎಂದರು.
ಕೋಳಿ ಅಂಕಕ್ಕೆ ದಾಳಿ ಮಡೆಸಲು ಬಂದ ವಿಟ್ಲ ಎಸ್.ಐ.ಗೆ ಕ್ಲಾಸ್ ತೆಗೆದುಕೊಂಡ ಶಾಸಕ ಅಶೋಕ್ ರೈ, ಕೋಳಿ ಅಂಕಕ್ಕೆ ಬಂದವರ ಮೇಲೆ ಹಲ್ಲೆ ಮಾಡಬೇಡಿ, ಹಲ್ಲೆ ಮಾಡಿದಲ್ಲಿ ಅವರ ಬಳಿಯೂ ಕೆಲವು ವಸ್ತುಗಳು ಇರುತ್ತವೆ. ಮತ್ತೆ ಸುಮ್ಮನೆ ಗಲಾಟೆ ಆಗುತ್ತದೆ. ಸಂಜೆ ತನಕ ಅವಕಾಶ ನೀಡಿ ಎಂದರು.