ಮಂಗಳೂರು ವಿ.ವಿ.: ಅರೆಭಾಷಾ ಸಂಶೋಧನಾ ಕೇಂದ್ರ ಚಟುವಟಿಕೆಗೆ ತೀರ್ಮಾನ

ಮಂಗಳೂರು ವಿ.ವಿ.: ಅರೆಭಾಷಾ ಸಂಶೋಧನಾ ಕೇಂದ್ರ ಚಟುವಟಿಕೆಗೆ ತೀರ್ಮಾನ


ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಅರೆಭಾಷಾ ಸಂಶೋಧನಾ ಕೇಂದ್ರ ಸ್ಥಾಪಿಸುವ ಕುರಿತು ವಿಶ್ವ ವಿದ್ಯಾನಿಲಯದ ವತಿಯಿಂದ ರಚಿಸಲಾದ ನಿಯಮಾವಳಿಗೆ ರಾಜ್ಯ ಸರಕಾರ ಹಾಗೂ ರಾಜ್ಯಪಾಲರ ಅನುಮೋದನೆ ದೊರೆತ ಹಿನ್ನಲೆಯಲ್ಲಿ ಸಂಶೋಧನಾ ಕೇಂದ್ರದ ಮುಂದಿನ ಚಟುವಟಿಕೆಗಳನ್ನು ನಡೆಸಲು ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆ  ತೀರ್ಮಾನಿಸಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆಯಲ್ಲಿ ಕುಲಪತಿಗಳ ಸಭಾಂಗಣದಲ್ಲಿ ಆನ್‌ಲೈನ್ ಮೂಲಕ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಈ ಕೇಂದ್ರದ ರೂಪುರೇಷೆಗಳ ಬಗ್ಗೆ ಸರಕಾರಕ್ಕೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ ಕೇಂದ್ರದ ಸ್ವರೂಪದ ಬಗ್ಗೆ ತಿಳಿಸಲಾಗಿತ್ತು. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಪ್ರಾದೇಶಿಕ ಭಾಷೆಯಾಗಿರುವ ಅರೆಭಾಷೆಯ ಬಗ್ಗೆ ಮತ್ತು ಈ ಭಾಷೆ ಮಾತನಾಡುವ ಜನರ ಭಾಷೆ, ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುವ ದೃಷ್ಟಿಯಿಂದ ಈ ಕೇಂದ್ರ ಮುಖ್ಯವಾಗುತ್ತದೆ ಎಂದು ಕುಲಪತಿ ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ 16 ಕಾಲೇಜುಗಳಲ್ಲಿ ಕೆಲವು ವಿಷಯಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಆಗದೆ ಇರುವ ಕಾರಣ ಮುಂದೆ ಪ್ರವೇಶಾತಿಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಕಾಲೇಜುಗಳ ಪ್ರಾಂಶುಪಾಲರ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು.

ರಾಜ್ಯ ಶಿಕ್ಷಣ ಮಾರ್ಗ ಸೂಚಿಯ ಪ್ರಕಾರ ಬಿ.ಎ ಪದವಿ ಕಾರ್ಯಕ್ರಮದ ನಾಲ್ಕನೆಯ ಸೆಮಿಸ್ಟರ್ ನ ಅರ್ಥಶಾಸ್ತ್ರ ಕೋರ್ಸಿಗೆ ಸಂಬಂಧಿಸಿದ ಕೌಶಲ್ಯ ಆಧಾರಿತ ಕೋರ್ಸ್ ಹಾಗೂ ಬಿ.ಎ ಪದವಿ ಕಾರ್ಯಕ್ರಮದ ಪತ್ರಿಕೋದ್ಯಮ ಕೋರ್ಸಿನ ತೃತೀಯ ಮತ್ತು ಚತುರ್ಥ ಸೆಮಿಸ್ಟರ್ ಗೆ ಅನ್ವಯವಾಗುವಂತೆ ಎಲೆಕ್ಟಿವ್ ಕೋರ್ಸ್ ಗಳ ಪಠ್ಯಕ್ರಮದ ಅನುಮೋದನೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ ಡಿ ನಂತರದ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಣಯಿಸಿ ಮಾರ್ಗಸೂಚಿಯನ್ನು ತಯಾರಿಸಿ ಎಲ್ಲಾ ನಿಕಾಯಗಳ ಡೀನರುಗಳ ಸಮಿತಿ ಸಲ್ಲಿಸಿದ ಪರಿಷ್ಕೃತ ಮಾರ್ಗ ಸೂಚಿಯನ್ನು ಶೈಕ್ಷಣಿಕ ಮಂಡಳಿ ಸಭೆ ಅನುಮೋದಿಸಿತು.

ಸ್ಪೀಚ್ ಅಂಡ್ ಹಿಯರಿಂಗ್ ಪಿ.ಹೆಚ್.ಡಿ. ಕೋರ್ಸುವರ್ಕ್ ನ ಪರಿಷ್ಕೃತ ಪಠ್ಯಕ್ರಮದ ಅನುಮೋದನೆ ಬಗ್ಗೆ ಡಾ.ದಿವ್ಯಾಂಜಲಿ ಶೆಟ್ಟಿ, ಅಧ್ಯಕ್ಷರು, ಪದವಿ ಮತ್ತು ಸ್ನಾತಕೋತ್ತರ ಅಡಿಯಾಲಜಿ ಆಂಡ್ ಸ್ಪೀಚ್ ಲ್ಯಾಂಗ್ವಿಜ್ ಪಾಥಾಲಜಿ ಸಂಯುಕ್ತ ಅಧ್ಯಯನ ಮಂಡಳಿ ವಿಶೇಷ ಸಭೆಯನ್ನು ನಡೆಸಿ ಪರಿಷ್ಕರಿಸಿ ಸಲ್ಲಿಸಿದ ಪಿ.ಹೆಚ್.ಡಿ. ಕೋರ್ಸು ವರ್ಕ್ ನ ಪಠ್ಯಕ್ರಮವನ್ನು ಸಭೆಯಲ್ಲಿ ಅನುಮೋದಿಸಲಾಯಿತು.

ಕುಲಸಚಿವರಾದ ಗಣೇಶ್ ಸಂಜೀವ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚ ಲಿಂಗ ಸ್ವಾಮಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article