ಅಂಬ್ಯುಲೆನ್ಸ್ ಕಳವು ಆರೋಪಿ ಸೆರೆ
Monday, December 22, 2025
ಮಂಗಳೂರು: ಅಂಬ್ಯುಲೆನ್ಸ್ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಉಡುಪಿ ಕಾರ್ಕಳ ನಿವಾಸಿ ಶೋದನ್ (22) ಎಂದು ಗುರುತಿಸಲಾಗಿದೆ.
ಕಡಬ ಶಿರಾಡಿ ನಿವಾಸಿ ಸುರೇಶ್ (46) ಅವರ ದೂರು ಆಧಾರದ ಮೇಲೆ, 19 ಡಿಸೆಂಬರ್ 2025 ರಂದು ಗುಂಡ್ಯ ಚೆಕ್ ಪೋಸ್ಟ್ ಬಳಿ ನಿಲ್ಲಿಸಿದ ಅಂಬ್ಯುಲೆನ್ಸ್ (KA-19-ಅ-7557) ಕಳವಾದ ಪ್ರಕರಣದಲ್ಲಿ ಉಪ್ಪಿನಂಗಡಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಸುರೇಶ್ ಅವರು ದಿನನಿತ್ಯದಂತೆ ಅಂಬ್ಯುಲೆನ್ಸ್ ಅನ್ನು ಗುಂಡ್ಯ ಚೆಕ್ ಪೋಸ್ಟ್ ಬಳಿ ನಿಲ್ಲಿಸಿ, ಬದಲಿ ಚಾಲಕನ ಅನುಕೂಲತೆಗೆ ಆಕಸ್ಮಿಕ ಕರೆ ಬಂದಾಗ ಕೀ ಇಟ್ಟು ಮನೆಗೆ ಹೋಗಿದ್ದರು. ಡಿ.20 ರಂದು ಪರಿಶೀಲಿಸಿದಾಗ, ಅಂಬ್ಯುಲೆನ್ಸ್ ಕಳವಾದುದಾಗಿ ಕಂಡುಬಂದಿತು.
ಈ ಬಗ್ಗೆ ಉಪ್ಪಿನಂಗಡಿ ಪೋಲೀಸರು ಕೂಡಲೇ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದರು. ಹಾಸನ ಜಿಲ್ಲೆಯ ಪೋಲೀಸರ ಸಹಕಾರದೊಂದಿಗೆ, ಆರೋಪಿ ಉಡುಪಿ ಕಾರ್ಕಳ ನಿವಾಸಿ ಶೋದನ್ (22) ಅವರನ್ನು ಹಾಸನದಲ್ಲಿ ಬಂಧಿಸಿ, ವಿಚಾರಣೆ ನಡೆಸಿದ ನಂತರ, ಕಳ್ಳತನ ಒಪ್ಪಿಕೊಂಡ ಆರೋಪಿಯಿಂದ ಕಳವಾದ ಅಂಬ್ಯುಲೆನ್ಸ್ ಅನ್ನು ವಶಪಡಿಸಿಕೊಳ್ಳಲಾಯಿತು. ನ್ಯಾಯಾಲಯದ ಮುಂದೆ ಆರೋಪಿ ಹಾಜರಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.