ವಿಕೃತಿ ಬಿಟ್ಟು ಶುದ್ಧ-ಶಾಂತ ಮನದಿಂದ ದೈವೀ ಸಾಕ್ಷಾತ್ಕಾರ ಪಡೆಯಬೇಕು: ಮೋಹನದಾಸ ಪರಮಹಂಸ ಸ್ವಾಮೀಜಿ
ಧರ್ಮಾವಲೋಕನ ಸಭೆ
ನಗರದ ಉರ್ವ ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ನಡೆದ ಧರ್ಮಾವಲೋಕನ ಸಭೆಯಲ್ಲಿ ದೈವಾರಾಧನೆ-ನಾಗಾರಾಧನೆ ಮತ್ತು ಧರ್ಮಾಚರಣೆ ಕುರಿತ ಅವಲೋಕನದಲ್ಲಿ ಆಶೀರ್ವಚನ ನೀಡಿದರು.
ಹಿಂದು ಸಮಾಜವನ್ನು ಒಡೆಯಲು ಇನ್ನಿಲ್ಲದ ಷಡ್ಯಂತ್ರಗಳು ನಡೆಯುತ್ತಿದ್ದು, ಇದಕ್ಕೆ ಹಿಂದು ಸಮಾಜ ಬಲಿಯಾಗಬಾರದು. ಆದ್ದರಿಂದ ನಾವು ಪ್ರೀತಿ, ಬಂಧುತ್ವ ಭಾವದಿಂದ ಧರ್ಮನಿಷ್ಠರಾಗಿರಬೇಕು. ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಅರಿತು ಅದನ್ನು ಸರಿಪಡಿಸಿಕೊಳ್ಳಬೇಕಿದೆ ಎಂದರು.
ಮೂಡಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಗುತ್ತಿನ ಮನೆಗಳೆಂದರೆ ಸತ್ಯ, ನ್ಯಾಯ, ಧರ್ಮವನ್ನು ಎತ್ತಿಹಿಡಿಯುವ ನೆಲೆಗಳು. ದೈವಾರಾಧನೆಯು ನಮ್ಮನ್ನು ಧರ್ಮಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ದೇವತಾರಾಧನೆ, ದೈವಾರಾಧನೆ, ನಾಗಾರಾಧನೆಗಳು ನಮಗೆ ನೆಮ್ಮದಿಯ ಬದುಕನ್ನು ಕಲ್ಪಿಸುತ್ತವೆ ಎಂದರು.
ಆಶೀವರ್ಚನ ನೀಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ದೇವರ ಬಗೆಗೆ ಮತ್ತು ದೇವಸ್ಥಾನದಲ್ಲಿನ ನಡವಳಿಕೆಗಳು ಯಾವ ಭಾವದಿಂದ ಇರಬೇಕು ಎಂಬ ಬಗ್ಗೆ ವಿವರಿಸಿದರು.
ಮಾಡೂರಿನ ಶ್ರೀ ಶಿವ ದುರ್ಗಾಂಬಾ ಮಠದ ಶ್ರೀ ದುರ್ಗಾನಂದ ಸ್ವಾಮೀಜಿ ಆಶೀರ್ವಚನವಿತ್ತರು.
ಈ ಸಂದರ್ಭ ನಾಗಾರಾಧನೆ ಮತ್ತು ದೈವಾರಾಧನೆ- ಧರ್ಮಾಚರಣೆ ವಿಷಯಗಳ ಕುರಿತ ಚರ್ಚೆಯ ಕುರಿತಂತೆ ಸಮನ್ವಯಕಾರರಾಗಿ ಮಾತನಾಡಿದ ವಿದ್ವಾಂಸ ಕೆ.ಎಲ್.ಕುಂಡಂತಾಯ ಅವರು, ನಾಗಾರಾಧನೆಯಲ್ಲಿ ಮುಗ್ಧಾರಾಧನೆಯೇ ಪ್ರಧಾನವಾದುದು. ಕುಟುಂಬ ಭಾವದಿಂದ ಎಲ್ಲರೂ ಒಂದಾಗಿ ನಾಗಾರಾಧನೆಗೈಯ್ಯುತ್ತೇವೆ. ಇದೇ ವೇಳೆ, ಕಾಂಕ್ರೀಟಿಕರಣದಂತಹ ವೈಭವೀಕರಣಕ್ಕೆ ಬದಲಾಗಿ ನಾಗಬನದ ಕಲ್ಪನೆಯನ್ನು ಉಳಿಸಿಕೊಂಡು ನಾಗಾರಾಧನೆಯ ಮೂಲ ಕಲ್ಪನೆಯನ್ನು ನಾವು ಕಾಯ್ದುಕೊಳ್ಳಬೇಕಿದೆ. ಇಲ್ಲವಾದಲ್ಲಿ ತಾದಾತ್ಮ್ಯ ಭಾವದ ಕೊರತೆ ಉಂಟಾಗಿ ಅರ್ಥವಿಲ್ಲದಂತಾದೀತು ಎಂದು ಹೇಳಿದರು.
ಲೌಕಿಕ ನೆಲೆಯಲ್ಲೂ ಮಾನವ ಅಭಿಯೋಗವಾಗದೆ ಇರುವ ಬನದಲ್ಲಿ ಕನಿಷ್ಠ 50-60ಪ್ರಭೇದಗಳ ವೃಕ್ಷಗಳು , 20-30 ಔಷಧಿಯ ಮಹತ್ವದ ಗಿಡ-ಮರಗಳು ಇರುವುದರತ್ತ ಗಮನ ಸೆಳೆದರು. ನಾಗಾರಾಧನೆಯ ವೇಳೆ, ಮಕ್ಕಳಾಗದ ಹೆಣ್ಣುಮಗಳಿಗೆ ಸಂತಾನ ಭಾಗ್ಯ ಕರುಣಿಸುವ ಮತ್ತು ಗದ್ದೆಯಲ್ಲಿ ಉತ್ತಮ ಬೆಳೆ ಕರುಣಿಸುವುದೇ ಮುಂತಾದ ಅಭಯವಾಣಿಗಳು ಅನನ್ಯವಾದುದು ಎಂದು ಬೊಟ್ಟು ಮಾಡಿದರು. ದೇವಸ್ಥಾನದಲ್ಲಿ ಧ್ವಜಸ್ತಂಭದೆದುರು ನಾನೆಷ್ಟು ಸಣ್ಣವ ಎಂಬ ಅರಿವು ಹೊಂದುವ ಮತ್ತು ದೇವಾರಾಧನೆ ಹಾಗೂ ದೈವಾರಾಧನೆಗಳಲ್ಲಿ ನಾವು ಹೇಗಿರಬೇಕು ಎಂಬುದರ ಬಗ್ಗೆ ವಿವರಿಸಿದರು.
ದೈವಾರಾಧಕ ಕಮಲಾಕ್ಷ ಗಂಧಕಾಡು, ಭುಜಂಗ ಶೆಟ್ಟಿ ಜಪ್ಪು ಗುಡ್ಡೆಗುತ್ತು ಮತ್ತಿತರರು ಮಾತನಾಡಿದರು. ಪ್ರಮುಖರಾದ ಡಾ.ಅಣ್ಣಯ್ಯ ಕುಲಾಲ್, ಉಮೇಶ್ ಶೆಟ್ಟಿ ಮುಂಬೈ, ಜಗದೀಶ್ ಅಽಕಾರಿ, ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಪುರುಷೋತ್ತಮ ಭಂಡಾರಿ ಅಡ್ಯಾರ್, ಆನಂದ ಶೆಟ್ಟಿ ಅಡ್ಯಾರ್, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಕಿರಣ್ ಬುಡ್ಲೆಗುತ್ತು, ಕಿರಣ್ ರೈ, ಹರಿರಾಜ್ ಶೆಟ್ಟಿ, ಪದ್ಮನಾಭ, ಲೋಕಯ್ಯ ಗೌಡ, ರಾಕೇಶ್ ಮಡಿವಾಳ, ಪ್ರಧಾನ ಸಂಚಾಲಕರಾದ ಭಾಸ್ಕರಚಂದ್ರ ಶೆಟ್ಟಿ, ಪ್ರವೀಣ್ ಕುತ್ತಾರ್, ಯೋಗೀಶ್ ಶೆಟ್ಟಿ ಜಪ್ಪು, ಕಿರಣ್ ಉಪಾಧ್ಯಾಯ, ವಿಜಯ್ ಶೆಟ್ಟಿ, ವಸಂತ ಶೇಣವ, ಪ್ರಕಾಶ್ ಇಳಂತಿಲ, ದಿವಾಕರ ಸಾಮಾನಿ, ಜನಾರ್ದನ ಅರ್ಕುಳ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ ಪ್ರಮೋದ್ ಕುಮಾರ್ ರೈ ದೋಣಿಂಜೆಗುತ್ತು ಸ್ವಾಗತಿಸಿ, ವಂದಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ನಿರೂಪಿಸಿದರು.