ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ವಿಸ್ಟಾಡೋಮ್ ರೈಲು ಸೇವೆ ಪುನಾರಾಂಭ: ಪ್ರಕೃತಿ ಸೌಂದರ್ಯ ಸವಿಯಲು ಅವಕಾಶ
ಮಂಗಳೂರು: ರೈಲ್ವೇ ವಿದ್ಯುದೀಕರಣ ಸಲುವಾಗಿ ಆರು ತಿಂಗಳ ಹಿಂದೆ ರದ್ದಾಗಿದ್ದ ಬೆಂಗಳೂರು- ಮಂಗಳೂರು- ಕಾರವಾರ ರೈಲು ಸೇವೆಯನ್ನು ಪುನಾರಂಭಗೊಳಿಸಲು ನಿರ್ಧರಿಸಲಾಗಿದೆ. ಕರಾವಳಿಗೆ ಸಂಚಾರ ಮಾಡುವ ವಿವಿಧ ರೈಲುಗಳಲ್ಲಿ ಒಂದಾದ ಈ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು (16575/16576) ಸೇವೆ ಮತ್ತೆ ಶುರುವಾಗಿದ್ದು ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.
ಬೆಂಗಳೂರಿನ ಯಶವಂತಪುರದಿಂದ ಈ ರೈಲು ವಾರದ ಮೂರು ದಿನ ಸಂಚರಿಸಲಿದೆ. ಇತ್ತೀಚೆಗೆ ಯಶವಂತಪುರ, ಹಾಸನ, ಸಕಲೇಶಪುರ ಮಾರ್ಗದಲ್ಲಿ ವಿದ್ಯುದೀಕರಣ ಮತ್ತು ಇತರ ಕಾಮಗಾರಿಗಳ ಕಾರಣದಿಂದಾಗಿ ಈ ರೈಲು ಸೇವೆಯನ್ನು ಜೂನ್‌ನಿಂದ ನವೆಂಬರ್ ವರೆಗೆ ಆರು ತಿಂಗಳ ಕಾಲ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಸೇವೆ ಪುನಾರಂಭಿಸಲಾಗಿದೆ.
ಪ್ರವಾಸೋದ್ಯಮ ಉತ್ತೇಜನ ಉದ್ದೇಶದಿಂದ ಪ್ರಕೃತಿ ಸೌಂದರ್ಯ ಸವಿಯಲು ಅನುಕೂಲವಾಗುವಂತೆ ರೈಲ್ವೆ ಇಲಾಖೆ ಈ ಗೊಮ್ಮಟೇಶ್ವರ ರೈಲಿಗೂ ವಿಸ್ಟಾಡೋಮ್ ಕೋಚ್ ಅಳವಡಿಸಿದೆ. ಅಗಲ ಗಾಜಿನ ಕಿಟಿಕಿ, ಬೃಹತ್ ಗಾಜಿನ ಮೇಲ್ಚಾವಣಿ, ವ್ಯವಸ್ಥಿತ ಆಸನಗಳಿದ್ದವು. ಇದರಿಂದ ಮಳೆಗಾಲದಲ್ಲಿ ಹಾಸನ, ಸಂಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಮಂಗಳೂರು ಮಾರ್ಗದುದ್ದಕ್ಕೂ ಕಾಣುವ ಪ್ರಕೃತಿಯನ್ನು ಸವಿಯಬಹುದಾಗಿತ್ತು. ಮಳೆಗಾಲದಲ್ಲೇ ಈ ರೈಲಿನ ರದ್ದತಿಯಿಂದ ಪ್ರಯಾಣಿಕರಿಗೆ ಒಂದಷ್ಟು ನಿರಾಸೆಯಾಗಿತ್ತು.
ಇದೀಗ ಶ್ರವಣಬೆಳಗೊಳ ಮೂಲಕ ಸಾಗುವ ಗೋಮಟೇಶ್ವರ ರೈಲು ಮತ್ತೆ ಆರಂಭಗೊಂಡಿದ್ದು ಯವಂತಪುರದಿಂದ ರವಿವಾರ, ಮಂಗಳವಾರ ಮತ್ತು ಗುರುವಾರ ಹೀಗೆ ವಾರದಲ್ಲಿ ಮೂರು ದಿನ ಪ್ರಯಾಣಿಸುತ್ತದೆ. ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ಹಾಸನ, ಶ್ರವಣಬೆಳಗೊಳ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ- ಪುತ್ತೂರು, ಬಂಟ್ವಾಳ ಮೂಲಕ ಮಂಗಳೂರಿಗೆ ಹೋಗುತ್ತದೆ. ಗೊಮ್ಮಟೇಶ್ವರ ರೈಲು ಸೇವೆ ಪುನಾರಂಭಗೊಳ್ಳುತ್ತಿದ್ದಂತೆ ಟಿಕೆಟ್ ಬುಕ್ಕಿಂಗ್ ಸಹ ಆರಂಭಗೊಂಡಿದೆ. ಪ್ರಯಾಣಕ್ಕೂ ಮುನ್ನ ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.indianrail.gov.in ಭೇಟಿ ನೀಡಬೇಕು. ರೈಲಿನ ಸೇವೆ ಬಗ್ಗೆ ಮಾಹಿತಿ, ಟಿಕೆಟ್, ಮಾರ್ಗ ಇತರ ಮಾಹಿತಿಗಾಗಿ ಸಹಾಯವಾಣಿ 139ಕ್ಕೆ ಕರೆ ಮಾಡುವಂತೆ ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.