ತಲ್ವಾರ್ ಹಿಡಿದು ರೀಲ್ಸ್ ಪೋಸ್ಟ್ ಆರೋಪ: ಇಬ್ಬರ ಬಂಧನ
ಮಂಗಳೂರು: ತಲ್ವಾರ್ ಹಿಡಿದು ನೃತ್ಯ ಮಾಡಿ ಅದರ ರೀಲ್ಸ್ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಬಂದರು ಜೆ.ಎಂ. ರೋಡ್ ನಿವಾಸಿ ಅಮೀರ್ ಸುಹೇಲ್ (28) ಮತ್ತು ಕಾವೂರು ಪಂಜಿಮೊಗರು ಉರುಂದಾಡಿ ಗುಡ್ಡೆ ನಿವಾಸಿ ಸುರೇಶ (29) ಬಂಧಿತ ಆರೋಪಿಗಳು.
"Suresh Psy" ಎಂಬ ಹೆಸರಿನ ಫೇಸ್‌ಬುಕ್ ಖಾತೆ ಹೊಂದಿರುವ ಸುರೇಶ ಡಿ.13 ರಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವೀಡಿಯೋದ ಮೇಲೆ ವೈಬ್ಸ್ ಮತ್ತು ಬಿಳಿ ಬಣ್ಣದ ಹೃದಯದ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿ ಹಾಕಿದ್ದ.
ಸಾಮಾಜಿಕ ಜಾಲತಾಣ ಪರಿಶೀಲನೆ ವೇಳೆ ಇದನ್ನು ಗಮನಿಸಿದ ಪೊಲೀಸರು, ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಕೆಲಸ ಮಾಡಿದ ಅಮೀರ್ ಸುಹೇಲ್ ಹಾಗೂ ಸುರೇಶನ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023 ಜತೆಗೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಕಲಂ 4.25(1ಬಿ) ಹಾಗೂ ಐ.ಟಿ. ಕಾಯ್ದೆ 66 ರಂತೆ ಪ್ರಕರಣ ದಾಖಲಿಸಿದ್ದರು.
ಆರೋಪಿಗಳನ್ನು ಬಂಧಿಸಿ ರೀಲ್ಸ್ ಮಾಡಲು ಬಳಸಿದ ತಲ್ವಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.