ಡಾ. ಐ.ಜೆ. ಮ್ಯಾಗೇರಿ ಅವರ ‘ಜೈಲ್ ಡೈರಿ’ ಕೃತಿಗೆ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’
2005ನೇ ಸಾಲಿನಲ್ಲಿ ಕೆಎಎಸ್ ಅಧಿಕಾರಿಯಾಗಿ ಕರ್ನಾಟಕ ಕಾರಾಗೃಹಗಳ ಇಲಾಖೆಯ ಸೇವೆಗೆ ಸೇರಿರುವ ಇವರು ಕರ್ನಾಟಕದ ಅನೇಕ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆಯಲ್ಲಿದ್ದಾರೆ.
2014ರಲ್ಲಿ ಭಾರತ ಸರ್ಕಾರದಿಂದ ಇಂಗ್ಲೆಂಡ್ ಮತ್ತು ಸ್ಯಾಟಲ್ಯಾಂಡ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕೆ ಏಕೈಕ ಅಧಿಕಾರಿಯಾಗಿ ಆಯ್ಕೆಗೊಂಡು ಅಲ್ಲಿಯ ಕಾರಾಗೃಹಗಳ ಸುಧಾರಣೆ ಮತ್ತು ಅಪರಾಧಿಗಳ ಮನಃಪರಿವರ್ತನೆಯ ಕಾರ್ಯಕ್ರಮಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಬಂಧಿಗಳ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ.
ಇವರ ಕರ್ತವ್ಯ ನಿಷ್ಠೆ ಮತ್ತು ಕಾರಾಗೃಹ ಆಡಳಿತದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಗಾಗಿ 2021ರಲ್ಲಿ ಕರ್ನಾಟಕ ಸರ್ಕಾರದಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿದೆ. ’ಹಿಂಸಾಕಾರಣ’, ಇವರ ಇನ್ನೊಂದು ಪ್ರಕಟಿತ ಕೃತಿ. ಇವರ ಬರಹಗಳು ಬೆಂಗಳೂರು ಮತ್ತು ತುಮಕೂರು ವಿವಿಗಳ ಪದವಿ ತರಗತಿಗೆ ಪಠ್ಯವಾಗಿದೆ.
ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಗೆ 22 ಕೃತಿಗಳು ಬಂದಿದ್ದು, ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಲೇಖಕಿ ಮತ್ತು ಪ್ರಾಧ್ಯಾಪಕಿ ಶಮೀಮಾ ಕುತ್ತಾರ್ ಹಾಗೂ ಪತ್ರಕರ್ತ, ಸಾಹಿತಿ ಹಂಝ ಮಲಾರ್ ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ.27 ರಂದು ಗಜೇಂದ್ರಗಡದಲ್ಲಿ ನಡೆಯಲಿದೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
