‘ಕ್ರೀಡಾ ಸಾಧಕಿ’ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ

‘ಕ್ರೀಡಾ ಸಾಧಕಿ’ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸನ್ಮಾನ


ಮಂಗಳೂರು: ಚೀನಾದ ಶಾಂಗ್ಲೋದಲ್ಲಿ ಡಿ.3 ರಿಂದ 13 ರ ವರೆಗೆ ನಡೆದ ವಿಶ್ವ ಶಾಲಾ ಮಕ್ಕಳ 15 ವರ್ಷ ಒಳಗಿನ ವಯೋಮಿತಿಯ ವಾಲಿಬಾಲ್ ಪಂದ್ಯಾಟದಲ್ಲಿ ಭಾರತದ ಬಾಲಕಿಯರ ತಂಡ ಭಾಗವಹಿಸಿದ್ದು, ಈ ತಂಡಕ್ಕೆ ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ನಾಯಕಿಯಾಗಿ ಭಾರತ ತಂಡವನ್ನು ಮುನ್ನಡೆಸಿದ್ದರು. ಅವರ ಈ ಕ್ರೀಡಾ ಸಾಧನೆಯನ್ನು ಗುರುತಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಸೋಮವಾರ ಬ್ಯಾಂಕಿನಲ್ಲಿ ಸನ್ಮಾನಿಸಿದರು.

ಕರಾವಳಿಗೆ ಹೆಮ್ಮೆ: 

ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, ಶಗುನ್ ಎಸ್. ವರ್ಮ ಹೆಗ್ಡೆ ಅವರು ಕಾರ್ಕಳದ ನಿವಾಸಿಗಳಾದ ಶೃತಿರಾಜ್ ಮತ್ತು ಸಂದೇಶ್ ವರ್ಮ ದಂಪತಿಯ ಪುತ್ರಿಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೇರಿದ ಮಹಾನ್ ಕ್ರೀಡಾ ಸಾಧಕಿ. ಪ್ರತಿಭಾನ್ವಿತ ಆಟಗಾರ್ತಿ ಆಗಿರುವ ಶಗುನ್ ಅವರು ವಿಶ್ವ ಶಾಲಾ ಮಕ್ಕಳ ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ 12 ಆಟಗಾರ್ತಿಯರಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ. ಮಾತ್ರವಲ್ಲ ತಂಡದ ನಾಯಕಿ ಅಗಿಯೂ ಉತ್ತಮ ಪ್ರದರ್ಶನವನ್ನು ನೀಡಿರುವುದು ನಮ್ಮ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಚಾರ. ಅವರ ಕ್ರೀಡಾ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟೂ ಪ್ರಜ್ವಲಮಾನವಾಗಿ ಬೆಳಗಿ, ಹಲವಾರು ಪ್ರಶಸ್ತಿಗಳು ಅವರ ಕ್ರೀಡಾ ಸಾಧನೆಗೆ ಲಭಿಸಲಿ ಎಂದು ಶುಭ ಹಾರೈಸಿದರು.

ಶಗುನ್‌ಗೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ 1 ಲಕ್ಷ:

ಶಗುನ್ ಎಸ್. ವರ್ಮ ಹೆಗ್ಡೆ ಅವರನ್ನು ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ಶಾಲು, ಫಲಪುಷ್ಪ, ಹಾರ, ಬೆಳ್ಳಿಯ ಸ್ಮರಣಿಕೆಯೊಂದಿಗೆ 1 ಲಕ್ಷದ ಚೆಕ್‌ನ್ನು ನೀಡಿ ಗೌರವಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕಿನ ನಿರ್ದೇಶಕರಾದ ಟಿ.ಜಿ. ರಾಜರಾಮ ಭಟ್, ಮೋನಪ್ಪ ಶೆಟ್ಟಿ ಎಕ್ಕಾರು, ಜೈರಾಜ್ ಬಿ. ರೈ, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಮೇಘರಾಜ್ ಆರ್. ಜೈನ್, ಉದ್ಯಮಿಗಳಾದ ಪುಷ್ಪರಾಜ್ ಜೈನ್, ಜಯಪ್ರಕಾಶ್ ತುಂಬೆ, ಸಿನಿಮಾ ನಟ ಸಂತೋಷ್ ಶೆಟ್ಟಿ ಹಾಗೂ ಶಗುನ್ ಅವರ ತಂದೆ ಸಂದೇಶ್ ವರ್ಮ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article