ಮಾನಸಿಕ ಆರೋಗ್ಯ ಎಲ್ಲರಿಗೂ ಅಗತ್ಯ: ಅರವಿಂದ ಶೆಣೈ
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾ ಭವನದಲ್ಲಿ ಆಂತರಿಕ ದೂರು ಸಮಿತಿ, ಶಿಕ್ಷಕ-ರಕ್ಷಕ ಸಂಘ, ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲಾ 371-ಡಿ, ಲಯನ್ಸ್ ಕ್ಲಬ್ ಅಶೋಕ ನಗರ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಹೆಚ್ಚಿಸುವಲ್ಲಿ ತರಗತಿ ಸಲಹೆಗಾರರ ಪಾತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ ಹಾಗೂ ಮಾನಸಿಕ ಆರೋಗ್ಯ: ಮಾನಸಿಕ ಆರೋಗ್ಯ ಅರ್ಥಮಾಡಿಕೊಳ್ಳಲು ಮತ್ತು ಕಾಳಜಿ ವಹಿಸಲು ಒಂದು ಮಾರ್ಗ ಭಿತ್ತಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಜಾಗೃತಿ, ಸ್ವೀಕೃತಿ, ಮಾರ್ಗದರ್ಶನ ಹಾಗೂ ಚಿಕಿತ್ಸೆ ಎಂಬ ನಾಲ್ಕು ಹಂತಗಳಲ್ಲಿ ಮಾನಸಿಕ ಆರೋಗ್ಯದ ಕುರಿತು ಮಾಹಿತಿ ನೀಡಲಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಒತ್ತಡದ ಬದುಕು ನಡೆಸುತ್ತಿರುವ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ವ್ಯಕ್ತಿಯ ಬದುಕು ಅಸಮತೋಲನದಿಂದ ಕೂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ ಮಂಗಳೂರು ಅಶೋಕನಗರ ಶಾಖೆಯ ಅಧ್ಯಕ್ಷ ಲಯನ್ಸ್ ಪ್ರಶಾಂತ್ ಬಿ. ಶೆಟ್ಟಿ, ಕಲಿಕೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ಅದು ಎಂದಿಗೂ ನಿರಂತರವಾಗಿರುತ್ತದೆ. ಬದುಕಿನ ಪ್ರತಿಹಂತದಲ್ಲೂ ಈಗಾಗಲೇ ಕಲಿತದ್ದನ್ನು ಮರೆತು ಹೊಸತಾದುದನ್ನು ಯಾವಾಗಲೂ ಕಲಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಯಾವಾಗಲೂ ನಮ್ಮನ್ನು ನಾವು ಉನ್ನತೀಕರಿಸುವ ಪ್ರಯತ್ನ ಮಾಡುತ್ತಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್., ಆಧುನಿಕ ಯುಗದಲ್ಲಿ ಅಧ್ಯಾಪಕರು ಪ್ರತಿದಿನ ತರಗತಿಯಲ್ಲಿ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ಅಲ್ಲದೇ, ಯುವ ಜನತೆ ಸಾಕಷ್ಟು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಅದನ್ನು ಯಾರ ಬಳಿಯೂ ಹಂಚಿಕೊಳ್ಳದೇ ತೊಳಲಾಡುತ್ತಿರುತ್ತಾರೆ. ಹಾಗಾಗಿ ಮಾರ್ಗದರ್ಶಕರು ಅವರಿಗೆ ನೆರವಾಗಬೇಕಿದೆ ಎಂದು ಹೇಳಿದರು.
ಮನಃಶಾಂತಿ ಮಾನಸಿಕ ಆರೋಗ್ಯ ಸಂಸ್ಥೆಯ ಡಾ. ರಮೀಲಾ ಶೇಖರ್, ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಹೆಚ್ಚಿಸುವಲ್ಲಿ ತರಗತಿ ಸಲಹೆಗಾರರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಮನೋಮಿತ್ರ ಭಿತ್ತಪತ್ರ ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜೀವನ್ ಕುಮಾರ್, ಲಯನ್ಸ್ ಸುರೇಶ್, ಆಂತರಿಕ ದೂರು ಸಮಿತಿ ಸಹನಿರ್ದೇಶಕಿ ಪ್ರೊ. ಸುಭಾಷಿಣಿ ಶ್ರೀವತ್ಸ, ಶಿಕ್ಷಕ-ರಕ್ಷಕ ಸಂಘದ ಸಂಯೋಜಕಿ ಡಾ. ಸುಧಾ ಎನ್. ವೈದ್ಯ, ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಂಯೋಜಕ ಡಾ. ಸಿದ್ದರಾಜು ಎಂ. ಎನ್. ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.