ವಿಧಾನಸಭೆಯಲ್ಲಿ ತಪ್ಪು ಮಾಹಿತಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಯ ಭರವಸೆ ನೀಡಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೇ ವಿಶೇಷವಾಗಿ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಯಲ್ಲಿ ರಾಜ್ಯದ ಜನತೆಗೆ ಮೋಸ ಮಾಡಿದೆ, ಜೊತೆಗೆ ಮೊನ್ನೆ ವಿಧಾನಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ 23 ಕಂತುಗಳಲ್ಲಿ ರಾಜ್ಯದ 1.25 ಕೋಟಿ ಮಹಿಳೆಯರಿಗೆ 2,000 ರೂ.ನಂತೆ ಪಾವತಿಸಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬಾಳ್ಕರ್ ಅವರು ಸುಳ್ಳು ಮಾಹಿತಿ ನೀಡಿ ವಿಧಾನಸಭಾ ವ್ಯವಸ್ಥೆಗೆ ಅಪಚಾರ ಮಾಡಿದ್ದಾರೆ.
ಪ್ರತಿ ತಿಂಗಳು ಹಣ ಜಮೆ ಆಗುತ್ತಿದೆ ಎಂದು ಸಾರ್ವಜನಿಕವಾಗಿ ರೀಲ್ ಮಾಡಿ ಹೇಳಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಎರಡು ತಿಂಗಳ ಅವಧಿಯಲ್ಲಿ ಸುಮಾರು 5,000 ಕೋಟಿ ರೂ. ಹಣವನ್ನು ಮಹಿಳೆಯರಿಗೆ ನೀಡದೇ ಕಣ್ಮರೆ ಮಾಡಿರುವುದು ಗಂಭೀರ ಅಪರಾಧಕ್ಕೆ ಸಮಾನ. ಈ ಹಣ ಎಲ್ಲಿಗೆ ಹೋಯಿತು ಎಂಬುದಕ್ಕೆ ಸರ್ಕಾರವೂ, ಸಚಿವೆಯೂ ಉತ್ತರ ನೀಡಬೇಕು. ಇದು ಕೇವಲ ಆಡಳಿತ ವೈಫಲ್ಯವಲ್ಲ, ಇದು ಕರ್ನಾಟಕದ ಮಹಿಳೆಯರ ಮೇಲಿನ ದ್ರೋಹ. ಗೃಹಲಕ್ಷ್ಮಿ ಹಣವು ದಾನವಲ್ಲ, ಅದು ಮಹಿಳೆಯರ ಹಕ್ಕು. ಆ ಹಕ್ಕನ್ನು ಕಿತ್ತುಕೊಳ್ಳುವ ಧೈರ್ಯ ಕಾಂಗ್ರೆಸ್ ಸರ್ಕಾರಕ್ಕೆ ಯಾರೂ ಕೊಟ್ಟಿಲ್ಲ. ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಚಿವೆ ಹೆಬ್ಬಾಳ್ಕರ್ ಅವರು ತಕ್ಷಣ ರಾಜೀನಾಮೆ ನೀಡಬೇಕು.
ಸದ್ಯದಲ್ಲೇ ಬರುವ ಚುನಾವಣೆಯಲ್ಲಿ ಮತಪೆಟ್ಟಿಗೆಯಲ್ಲೇ ಕಾಂಗ್ರೆಸ್‌ಗೆ ಮಹಿಳೆಯರ ಶಕ್ತಿ ಏನು ಎಂಬುದು ಗೊತ್ತಾಗಲಿದೆ. ಬಾಕಿ ಇರುವ ಗೃಹಲಕ್ಷ್ಮಿ ಹಣವನ್ನು ಸರಕಾರ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ಅನಿಲ್ ರಾವ್ ಒತ್ತಾಯಿಸಿದ್ದಾರೆ.