ಜಾನುವಾರು ಹತ್ಯೆ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ

ಜಾನುವಾರು ಹತ್ಯೆ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ


ಮಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ಮಂಗಳೂರು ಗೋರಕ್ಷಾ ವಿಭಾಗ ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಈಗಿರುವ ಕಾನೂನು ಪ್ರಬಲವಾಗಿದ್ದು, ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕೇ ಹೊರತು ಯಾವುದೇ ಕಾರಣಕ್ಕೂ ಕಾಯ್ದೆಯನ್ನು ಸಡಿಲಗೊಳಿಸಬಾರದು. ಆದರೆ ರಾಜ್ಯ ಸರ್ಕಾರವು ಕಾನೂನು ಸಡಿಲಗೊಳಿಸಿ ಗೋ ಕಳ್ಳರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ ಎಂದು ಆಕ್ಷೇಪಿಸಿದರು.

ಆಂದ್ರಪ್ರದೇಶ ಸರ್ಕಾರವು ಗೋವಂಶ ಉಳಿಸುವ ಉದ್ದೇಶದಿಂದ ಗೋಕುಲಂ ಯೋಜನೆ ಘೋಷಣೆ ಮಾಡಿದೆ. ಆದರೆ ಕರ್ನಾಟಕದಲ್ಲಿ ಗೋ ರಕ್ಷಣೆಗಾಗಿ ಇರುವ ಕಾನೂನನ್ನು ಸಡಿಲಗೊಳಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರ ಕಾರ್ಯದಕ್ಷತೆಯನ್ನು ಪ್ರಶ್ನೆ ಮಾಡಬೇಕಾಗಿದೆ ಎಂದರು.

ವಿಹಿಂಪ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡಿ, ರಾಜ್ಯ ಸರ್ಕಾರವು ಗೋ ಹಂತಕರು, ಗೋ ಮಾಫಿಯಾದ ಪರವಾಗಿ ಕೆಲಸ ಮಾಡುತ್ತಿದೆ. ಗೋ ಕಳ್ಳರಿಗೆ ಶಿಕ್ಷೆಯಾಗಬಾರದು ಎಂಬ ಕಾರಣಕ್ಕಾಗಿ ಈ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ. ಕಾನೂನು ಸಡಿಲಗೊಳಿಸಿದರೆ ಮುಂದೆ ಉಂಟಾಗಬಹುದಾದ ಅನಾಹುತಕ್ಕೆ ಸರ್ಕಾರವೇ ಕಾರಣವಾಗಲಿದೆ ಎಂದು ಎಚ್ಚರಿಸಿದರು.

ವಿಹಿಂಪ ಗೋರಕ್ಷಾ ವಿಭಾಗ ಪ್ರಮುಖ ಕಟೀಲು ದಿನೇಶ ಪೈ ಮಾತನಾಡಿದರು. ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಜಿಲ್ಲಾ ಉಪಾಧ್ಯಕ್ಷ ಮನೋಹರ ಸುವರ್ಣ, ಬಜರಂಗದಳ ಪ್ರಾಂತ ಸಹ ಸಂಯೋಜಕ ಭುಜಂಗ ಕುಲಾಲ್, ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಪ್ರಮುಖರಾದ ಪೊಳಲಿ ಗಿರಿಪ್ರಕಾಶ ತಂತ್ರಿ, ಜಗದೀಶ ಶೇಣವ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article