ಸರ್ಕಾರದ ಯೋಜನಾ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿಳಂಬ: ಕ್ರಮಕ್ಕೆ ಸೂಚನೆ

ಸರ್ಕಾರದ ಯೋಜನಾ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿಳಂಬ: ಕ್ರಮಕ್ಕೆ ಸೂಚನೆ


ಮಂಗಳೂರು: ವಿವಿಧ ಸರ್ಕಾರಿ ನೇರಸಾಲ ಯೋಜನೆಯಲ್ಲಿ  ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಮಂಜೂರು ಮಾಡಲು ವಿಳಂಬಿಸಬಾರದು ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ. ಸೂಚಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ, ಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಎಸ್.ಸಿ.ಪಿ/ ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಇಲಾಖೆ ಮತ್ತು ಅಭಿವೃದ್ಧಿ ನಿಗಮಗಳ ಸಬ್ಸಿಡಿ ಆಧಾರಿತ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಬ್ಯಾಂಕ್ಗಳು ಸಿಬಿಲ್ ಕೊರತೆ ನೆಪದಲ್ಲಿ ನಿರಾಕರಿಸುತ್ತಿದೆ ಎಂದು ಸಭೆಯಲ್ಲಿ ಸಮಿತಿ ಸದಸ್ಯರು ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಲೀಡ್ ಬ್ಯಾಂಕ್ ಗಮನಕ್ಕೆ ತಂದು ಫಲಾನುಭವಿಗಳಿಗೆ  ಸಾಲ ಮಂಜೂರು ಮಾಡಲು ವಿಳಂಬವಾಗದಂತೆ  ಕ್ರಮ ಕೈಗೊಳ್ಳಲು  ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ಅರುಣ್  ಮಾತನಾಡಿ, ಬ್ಯಾಂಕ್‌ನಲ್ಲಿ ಫಲಾನುಭವಿಯ ಇತರ ಸಾಲಗಳಿಗೆ  ಸರ್ಕಾರದ ಯೋಜನೆಯ ಸಾಲವನ್ನು ಲಿಂಕ್ ಮಾಡದಂತೆ ಕ್ರಮ ಕೈಗೊಳ್ಳಲು  ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿವೇತನವನ್ನು  ಮ್ಯಾಪಿಂಗ್ ವ್ಯತ್ಯಾಸದ ಹೆಸರಿನಲ್ಲಿ  ಮಂಜೂರು ಮಾಡಲು ವಿಳಂಬಿಸಲಾಗುತ್ತಿರುವ  ಬಗ್ಗೆ ಸಮಿತಿ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ  ಮುಂದಿನ ಒಂದು ವಾರದೊಳಗೆ ವರದಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಪೊಲೀಸ್   ಅಧೀಕ್ಷಕರು ಸೂಚಿಸಿದರು.

ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಗಳಲ್ಲಿ   ಸಮಾಜದ ಸಮಸ್ಯೆಗಳನ್ನು ಹೊರತುಪಡಿಸಿ  ಅನ್ಯ ವಿಷಯಗಳನ್ನು ಚರ್ಚಿಸದಂತೆ  ಅಪರ ಜಿಲ್ಲಾಧಿಕಾರಿಗಳು ತಹಶೀಲ್ದಾರ್ಗಳಿಗೆ  ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೇಮಲತಾ  ಮಾತನಾಡಿ, ಪ್ರಸಕ್ತ ವರ್ಷ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 61 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 45 ಪ್ರಕರಣಗಳಲ್ಲಿ 58.10 ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 29 ಪ್ರಕರಣಗಳು ದಾಖಲಾಗಿದ್ದು, 29 ಲಕ್ಷ ಪರಿಹಾರ ಮಂಜೂರು ಮಾಡಲಾಗಿದೆ. ಬಾಕಿ ಪ್ರಕರಣಗಳ ಪರಿಹಾರ ಪಾವತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ನಾಗರಿಕ ಹಕ್ಕು ನಿರ್ದೇಶನಾಲಯ ಪೊಲೀಸ್ ಅಧೀಕ್ಷಕ ಸಿ.ಎ ಸೈಮನ್, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ.ಜಿ ಸಂತೋಷ್ ಕುಮಾರ್  ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article