ಜಯಂತ್ ಟಿ.ಗೆ ಎಸ್‌ಐಟಿ ವರದಿ ನೀಡಲು ಸಮ್ಮತಿಸಿದ ನ್ಯಾಯಾಲಯ
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್.ಐ.ಟಿ)ಯು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಪ್ರಾಥಮಿಕ ವರದಿಯನ್ನು ಕೇಳಿ ಸೌಜನ್ಯ ಪರ ಹೋರಾಟಗಾರ ಜಯಂತ್. ಟಿ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು, 3923 ಪುಟಗಳ ದಾಖಲೆ ನೀಡಲು ಸಮ್ಮತಿಸಿರುವುದಾಗಿ ಜಯಂತ್. ಟಿ ಪರವಾಗಿ ವಾದ ಮಂಡಿಸಿದ್ದ ಬೆಂಗಳೂರಿನ ಹಿರಿಯ ನ್ಯಾಯವಾದಿಗಳು ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್.ಐ.ಟಿಯು ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಹಾಗೂ ಇತರರಿಗೆ ನಿರಂತರವಾಗಿ ನೋಟೀಸ್ ನೀಡುತ್ತಾ ಬಂದಿತ್ತು. ಹಾಜರಾಗದಿದ್ದರೆ ಬಂಧಿಸುವುದಾಗಿ ನೋಟೀಸ್ ನೀಡಿತ್ತು. ಇದಾದ ಬಳಿಕ ಎಸ್.ಐ.ಟಿಯು ನ್ಯಾಯಾಲಯದ ಮುಂದೆ ಪ್ರಾಥಮಿಕ ವರದಿಯನ್ನು ಸಲ್ಲಿಸಿತ್ತು.
ತಾನು ಆರೋಪಿ ಎಂದು ನೋಟೀಸ್ ನೀಡಿರುವ ಹಿನ್ನಲೆಯಲ್ಲಿ ಎಸ್.ಐ.ಟಿ ಸಲ್ಲಿಸಿರುವ ವರದಿಯನ್ನು ತನಗೆ ನೀಡುವಂತೆ ಆಗ್ರಹಿಸಿ ಜಯಂತ್ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು. ಎಸ್.ಐ.ಟಿಯು ವರದಿಯನ್ನು ಬಹಿರಂಗಪಡಿಸದಂತೆ ಕೇಳಿಕೊಂಡಿರುವ ಕಾರಣದಿಂದ ಈ ವರದಿಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಿರಿಯ ನ್ಯಾಯವಾದಿಯೊಬ್ಬರು ಪ್ರಕರಣದ ಬಗ್ಗೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮುಂದೆ ಜಯಂತ್ ಟಿ ಪರವಾಗಿ ವಕಾಲತು ವಹಿಸಿ, ಎಸ್.ಐ.ಟಿ ಸಲ್ಲಿಸಿದ್ದ ವರದಿಯನ್ನು ನೀಡುವಂತೆ ವಿನಂತಿಸಿದ್ದರು.