ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ತತ್ವಗಳನ್ನು ಅಳವಡಿಸುವ ಕಾರ್ಯ ಆಗಬೇಕಿದೆ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ತತ್ವಗಳನ್ನು ಅಳವಡಿಸುವ ಕಾರ್ಯ ಆಗಬೇಕಿದೆ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್


ಮಂಗಳೂರು: ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ತತ್ವಗಳನ್ನು ಅಳವಡಿಸುವ ಕಾರ್ಯ ಆಗಬೇಕಿದೆ ಎಂದು ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.


ನಗರದ ಕೊಡಿಯಾಲ್‌ಬೈಲ್ ಶಾರದಾ ವಿದ್ಯಾಲಯದ ಭೂವರಾಹ ಬಯಲು ಸಭಾಂಗಣದಲ್ಲಿ ಭಾನುವಾರ ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ನಮ್ಮ ಪೂರ್ವಜರು ಧರ್ಮ ಪಾಲನೆ ಮಾಡುತ್ತಿದ್ದುದರಿಂದ ಉತ್ತಮ ಕೆಲಸ ಕಾರ್ಯಗಳನ್ನು ಅವರು ಮಾಡುವಂತಾಯಿತು. ರಾಜಪ್ರಭುತ್ವ ಈಗ ಇಲ್ಲದಿದ್ದರೂ ಅವರೆಲ್ಲರ ಹೆಸರು ಶಾಶ್ವತವಾಗಿರಲು ಧರ್ಮ ಪಾಲನೆಯೇ ಮುಖ್ಯ ಕಾರಣ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ತತ್ವಗಳನ್ನು ಅಳವಡಿಸುವ ಸವಾಲು ದೊಡ್ಡದಿದ್ದರೂ, ಆ ಕಾರ್ಯ ಆಗಲೇಬೇಕಾದ ಅನಿವಾರ್ಯತೆಯಿದೆ ಎಂದು ಪ್ರತಿಪಾದಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉಂಟುಮಾಡಿದ್ದರೂ ಇಂದಿಗೂ ಅನೇಕ ಕಡೆಗಳಲ್ಲಿ ಶಿಕ್ಷಣ ಕ್ಷೇತ್ರ ಮೂಲಸೌಕರ್ಯ ಕೊರತೆಯನ್ನು ಎದುರಿಸುತ್ತಿದೆ. ಆದರೆ ಶಾರದಾ ವಿದ್ಯಾಸಂಸ್ಥೆಯಲ್ಲಿ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಧರ್ಮ ಪಾಲನೆ-ಸಂಸ್ಕೃತಿ ರಕ್ಷಣೆ, ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.


ಕೇಂದ್ರ ಸರ್ಕಾರ ಕ್ರೀಡೆಗೆ ಸರ್ವ ಪ್ರೋತ್ಸಾಹ ನೀಡುತ್ತಿದೆ. ಒಲಿಂಪಿಕ್ಸ್‌ನಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವುದರೊಂದಿಗೆ ವಿಶ್ವ ಮಟ್ಟದಲ್ಲಿ ಭಾರತ ಇನ್ನಷ್ಟು ಮುಂದುವರಿಯಬೇಕಿದೆ ಎಂದ ಯದುವೀರ್, ನಮ್ಮ ದೇಶದಲ್ಲಿ ಕಾಮನ್‌ವೆಲ್ತ್ ಕ್ರೀಡೆ ಆಯೋಜನೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಮುಂದೆ ಒಲಂಪಿಕ್ ಕ್ರೀಡಾಕೂಟವನ್ನು ಭಾರತದಲ್ಲೇ ನಡೆಸುವ ಸುಯೋಗ ಒದಗಿಬರಲಿ ಎಂದು ಆಶಿಸಿದರು.


ಪ್ರಸ್ತುತ ಆರೋಗ್ಯ ಸಮಸ್ಯೆಗಳಿಗೆ ವ್ಯಾಯಾಮ ರಹಿತ ಜೀವನ ಶೈಲಿಯೇ ಮುಖ್ಯ ಕಾರಣ. ಎಳೆ ವಯಸ್ಸಿನಲ್ಲೇ ಕ್ರೀಡೆಯತ್ತ ಮಕ್ಕಳ ಮನಸ್ಸನ್ನು ಸೆಳೆದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.


ರಾಜ್ಯದ ಪರಂಪರೆಗೆ ಮೈಸೂರು ಹೃದಯವಾದರೆ, ಕರಾವಳಿ ಬೆನ್ನೆಲುಬು ಇದ್ದಂತೆ. ಕರಾವಳಿಯಲ್ಲಿ ರಾಜ್ಯದ ಪರಂಪರೆಯ ರಕ್ಷಣೆಯ ಕಾರ್ಯ ನಡೆಯುತ್ತಿದೆ. ನಮ್ಮ ಶಕ್ತಿ ಮೀರಿ ನಾವು ಕೆಲಸ ಮಾಡಿದರೆ ಅದು ರಾಷ್ಟ್ರಕ್ಕೆ ದೊಡ್ಡ ಕೊಡುಗೆಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಮಾತನಾಡಿ, ಈ ಕ್ರೀಡೋತ್ಸವದಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಶಾರದಾ ವಿದ್ಯಾಲಯ ಆರಂಭವಾಗಿ 33 ವರ್ಷಗಳು ಸಂದಿದ್ದು, ಮೆಕಾಲೆ ಶಿಕ್ಷಣ ಪದ್ಧತಿಗೆ ಪರ್ಯಾಯವಾಗಿ ಭಾರತೀಯ ಜೀವನ ಮೌಲ್ಯ, ಸಂಸ್ಕಾರಗಳನ್ನು, ಭಾರತೀಯ ಚಿಂತನೆಗಳಿಗೆ ಅವಕಾಶ ಕೊಡುವ ಕೆಲಸ ಮಾಡಲಾಗುತ್ತಿದೆ. ಶಾರದಾ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭ ಶಾರದಾ ಸಮೂಹ ಸಂಸ್ಥೆ ವತಿಯಿಂದ ಯದುವೀರ್ ಅವರಿಗೆ ಆರತಿ ಬೆಳಗಿ ಗೌರವಾರ್ಪಣೆ ಸಲ್ಲಿಸಲಾಯಿತು. ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ ರಚಿಸಿದ ಕಲಾಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು.

ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ, ಉದ್ಯಮಿ ನಾಗಾರ್ಜುನ್, ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕ ಹಾಗೂ ಟ್ರಸ್ಟಿ ಸಮೀರ್ ಪುರಾಣಿಕ್, ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಭಟ್, ಸುನಂದಾ ಪುರಾಣಿಕ್, ಕರ್ನಾಟಕ ಹೈಕೋರ್ಟ್‌ನ ನ್ಯಾಯವಾದಿ ಅರುಣ್ ಶ್ಯಾಮ್, ಪ್ರದೀಪ ಕುಮಾರ ಕಲ್ಕೂರ, ರಘುನಾಥ ಸೋಮಯಾಜಿ, ಸುಧಾಕರ ರಾವ್ ಪೇಜಾವರ, ಪ್ರೊ. ಲೀಲಾ ಉಪಾಧ್ಯಾಯ, ಸೀತಾರಾಮ ಭಟ್, ಪ್ರಾಂಶುಪಾಲರಾದ ಪ್ರಕಾಶ್ ನಾಯಕ್, ದಯಾನಂದ ಕಟೀಲ್, ಸತ್ಯ ನಾರಾಯಣ ಭಟ್, ವಿದ್ಯಾ ಭಾರತಿಯ ಹಿರಿಯರಾದ ವಸಂತ ಮಾಧವ ಮತ್ತಿತರರು ಇದ್ದರು.

ಮೈನವಿರೇಳಿಸಿದ ಕ್ರೀಡಾ, ಸಾಂಸ್ಕೃತಿಕ ಪ್ರದರ್ಶನ:

ಶಾರದಾ ವಿದ್ಯಾಲಯದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರದರ್ಶಿಸಿದ ಮಲ್ಲಕಂಬ ಕಸರತ್ತು, ಸಮೂಹ ನೃತ್ಯ, ಸಮೂಹ ಗಾಯನ, ಸ್ಕೌಟ್ಸ್ ಗೈಡ್ಸ್, ತಾಲೀಮು ಪ್ರದರ್ಶನ ಇತ್ಯಾದಿ ನೋಡುಗರ ಮನಸೂರೆಗೊಳಿಸಿತು. ಕಾರ್ಯಕ್ರಮಕ್ಕೂ ಮೊದಲು ಆಕರ್ಷಕ ಮೆರವಣಿಗೆ ಮೂಲಕ ಯದುವೀರ್ ಅವರನ್ನು ಕರೆತರಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article