ರಜತ ಮಹೋತ್ಸವದ ಸಂಭ್ರಮದಲ್ಲಿ ಆದರ್ಶ ಸಂಸ್ಥೆ: ಡಿ.19 ರಿಂದ 21 ರವರೆಗೆ ವಿವಿಧ ಕಾರ್ಯಕ್ರಮಗಳು
ಡಿಸೆಂಬರ್ 19ರಂದು ವಿಶೇಷ ಚೇತನರ ಸಮಾವೇಶ ಮತ್ತು ಕಲಾಮೇಳ:
ಮೊದಲ ದಿನ, ವಿಶೇಷ ಚೇತನರ ಸಮಾವೇಶ ಮತ್ತು ಕಲಾಮೇಳ ನಡೆಯಲಿದೆ. ಬೆಳಗ್ಗೆ, ಲೇಬರ್ ಶಾಲೆಯ ಬಳಿಯಿಂದ ವಿಕಲಚೇತನರು, ವಿಶೇಷ ಮಕ್ಕಳ ಪೋಷಕರು, ಶಿಕ್ಷಕರು ಮತ್ತು ಹಿತೈಷಿಗಳಿಂದ ಜಾಗೃತಿ ಜಾಥಾ ಆರಂಭಗೊಂಡು ಸಮಾಜ ಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ದ. ಕ. ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಘ, ಅಧ್ಯಕ್ಷ ಮುರಳೀಧರ ನ್ಯಾಕ್ ಅಧ್ಯಕ್ಷತೆ ವಹಿಸಲಿದ್ದು, ತಹಶೀಲ್ದಾರ್ ಶ್ರೀಧರ ಮುಂದಲಮನಿ ಸಮಾರಂಭ ಉದ್ಘಾಟಿಸುವರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಅರ್ಜುನ್ ಭಂಡಾರ್ಕರ್, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ., ಪುರಸಭೆ ಮುಖ್ಯಾಧಿಕಾರಿ ಇಂದು ಎಂ,ಅಧ್ಯಕ್ಷೆ ಜಯಶ್ರೀ ಕೇಶವ್ ಮುಖ್ಯ ಅತಿಥಿಗಳಾಗಿರುವರು.
ಸಭಾ ಕಾರ್ಯಕ್ರಮದ ಬಳಿಕ, ವಿಶೇಷ ಚೇತನರಿಂದ ಕಲಾಮೇಳ ನಡೆಯಲಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 500 ವಿಶೇಷ ಚೇತನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಎರಡನೇ ದಿನ, ಉದ್ಯೋಗ ತರಬೇತಿ ಕಾರ್ಯಾಗಾರ ಮತ್ತು ಸ್ವಸಹಾಯ ಸಂಘಗಳ ಗ್ರಾಮೀಣ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಈ ಮೇಳವು ಡಿ. 20 ಮತ್ತು 21ರಂದು ಸಹ ಮುಂದುವರೆಯಲಿದೆ. ಸಮೃದ್ಧಿ ಸಂಜೀವಿನಿ ಪಂಚಾಯತ್ ಮಟ್ಟದ ಒಕ್ಕೂಟ, ಹೊಸಬೆಟ್ಟು ಇದರ ಸಹಕಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ 40ಕ್ಕೂ ಹೆಚ್ಚು ಸ್ವ ಉದ್ಯೋಗಿಗಳು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಿದ್ದಾರೆ.
ರಜತ ಮಹೋತ್ಸವದ ಸಮಾರೋಪ ಸಮಾರಂಭವು ಡಿಸೆಂಬರ್ 21ರಂದು ನಡೆಯಲಿದೆ.ಬೆಳಿಗ್ಗೆ 9.30ಕ್ಕೆ ಜ್ಯೋತಿನಗರ ಶಾಲಾ ಬಳಿಯಿಂದ ವಿವಿಧ ಕಲಾ ತಂಡಗಳೊಂದಿಗೆ ಸಂಸ್ಥೆಯ ಸಮವಸ್ತ್ರಧಾರಿ ಸದಸ್ಯರ ಭವ್ಯ ಮೆರವಣಿಗೆ ನಡೆಯಲಿದೆ. ನಂತರ ಸಮಾಜ ಮಂದಿರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿಯವರು ಅಶೀರ್ವಚನ ನೀಡಲಿದ್ದಾರೆ. ವಿಧಾನ ಸಭಾಧ್ಯಕ್ಷರಾದ ಯು. ಟಿ. ಖಾದರ್, ಆಳ್ವಾಸ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಮುಖ್ಯ ಅತಿಥಿಗಳಾಗಿರುವರು. ಅದೇ ದಿನ ಅಪರಾಹ್ನ, ಸ್ವಸಹಾಯ ಸಂಘಗಳ ಸದಸ್ಯರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಇರಲಿದೆ. ಸಂಜೆ, ಬಲೆ ಚಾ ಪರ್ಕ ತಂಡಮಂಗಳೂರು ಇವರಿಂದ 'ಪುದರ್ ದೀತಿಜಿ' ಎಂಬ ಸಾಮಾಜಿಕ, ಹಾಸ್ಯಮಯ ನಾಟಕವು ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕಳೆದ ಮಾರ್ಚ್ 9ರಂದು ಬಜಗೋಳಿಯಲ್ಲಿ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದ್ದು, ನಂತರ 13 ವಲಯಗಳಲ್ಲಿ ಸದಸ್ಯರ ಸಮಾವೇಶ ಹಾಗೂ 25 ವರ್ಷ ಪೂರೈಸಿದ 38 ಸ್ವಸಹಾಯ ಸಂಘಗಳಲ್ಲಿ ಸಂಘ ಮಟ್ಟದ ರಜತ ಮಹೋತ್ಸವಗಳನ್ನು ನಡೆಸಲಾಗಿದೆ. ಇತ್ತೀಚೆಗೆ ನವೆಂಬರ್ 30ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಸದಸ್ಯರಿಗಾಗಿ ಕ್ರೀಡೋತ್ಸವವನ್ನು ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ವಸಂತಿ ಶೆಟ್ಟಿ, ಪ್ರಚಾರ ಸಮಿತಿಯ ಸಂಚಾಲಕ ಗಣೇಶ್ ಬಾರ್ದಿಲ ಪತ್ರಿಕಾಗೋಷ್ಠಿಯಲ್ಲಿದ್ದರು.