ಮೂಡುಬಿದಿರೆ ಲೆಪ್ಪದ ಬಸದಿಯಲ್ಲಿ 39ನೇ ವಾರ್ಷಿಕ ಅಟ್ಟಳಿಗೆ  ಅಭಿಷೇಕದ ಧಾರ್ಮಿಕ ಮಹೋತ್ಸವ

ಮೂಡುಬಿದಿರೆ ಲೆಪ್ಪದ ಬಸದಿಯಲ್ಲಿ 39ನೇ ವಾರ್ಷಿಕ ಅಟ್ಟಳಿಗೆ ಅಭಿಷೇಕದ ಧಾರ್ಮಿಕ ಮಹೋತ್ಸವ


ಮೂಡುಬಿದಿರೆ: ಇಲ್ಲಿನ  ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ, ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಶ್ರೀ ಜ್ವಾಲಾ ಮಾಲಿನೀ ಅಮ್ಮನವರ ಲೆಪ್ಪದ ಬಸದಿಯಲ್ಲಿ 39ನೇ ವಾರ್ಷಿಕ ಅಟ್ಟಳಿಗೆ ಅಭಿಷೇಕ ಮಹೋತ್ಸವವು ಸೋಮವಾರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಮಹೋತ್ಸವವು ಬೆಳಿಗ್ಗೆ ಜ್ವಾಲಾ ಮಾಲಿನೀ ಅಮ್ಮನವರ ಪ್ರತಿಷ್ಠಾಪನಾ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು. ಸಾಯಂಕಾಲ ಮುಖವಸ್ತ್ರ ಉದ್ಘಾಟನಾ ಸಮಾರಂಭ ನಡೆಯಿತು. ರಾತ್ರಿ ಅಟ್ಟಳಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ವಿಶೇಷ ಅಭಿಷೇಕವನ್ನು ನೆರವೇರಿಸಲಾಯಿತು. ಉತ್ಸವದ ಅಂಗವಾಗಿ ಕೆರೆ ಬಸದಿಯ ಶ್ರೀ ಮಲ್ಲಿನಾಥ ಸ್ವಾಮಿ, ದೇರಮ್ಮ ಶೆಟ್ರ ಬಸದಿಯ ಶ್ರೀ ಅರ-ಮಲ್ಲಿ-ಮುನಿಸುವೃತ ಸ್ವಾಮಿ ಹಾಗೂ ಸೆಟ್ಟಿ ಬಸದಿಯ ನೇಮಿನಾಥ ಸ್ವಾಮಿಗೂ ಪಂಚಾಮೃತ ಅಭಿಷೇಕಗಳನ್ನು ನೆರವೇರಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಕೇಳ ಸುಧಾಕರ್ ಮಂಗಳಾದೇವಿ ಹಾಗೂ ಹೇಮಚಂದ್ರ ಮೂಡುಬಿದಿರೆ ಬಳಗದವರಿಂದ ಸ್ಯಾಕ್ಸೋಫೋನ್ ನಾದ ವೈಭವ ನಡೆಯಿತು. ಇದು ನೆರೆದ ಭಕ್ತಾದಿಗಳಿಗೆ ಸಂಗೀತ ರಸದೌತಣವನ್ನು ನೀಡಿತು.

ಈ ಧಾರ್ಮಿಕ ಸಮಾರಂಭದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ಕೆ.ಪಿ ಜಗದೀಶ್ ಅಧಿಕಾರಿ ಕೆಲ್ಲಪುತ್ತಿಗೆ, ಬಸದಿಗಳ ಮೊಕ್ತೇಸರರಾದ ಎಂ. ಸುದೇಶ್ ಕುಮಾರ್, ಆದರ್ಶ ಎಂ. ಕೊಂಡೆಮನೆತನ, ಚೌಟರ ಅರಮನೆ ಕುಟುಂಬಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಶ್ರಾವಕರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article