ಗಾಂಜಾ 'ಪೆಡ್ಲರ್' ಕಲ್ಲಡ್ಕದ ಅಪ್ಪಿ ಮೂಡುಬಿದಿರೆ ಪೊಲೀಸರ ಬಲೆಗೆ
Wednesday, December 17, 2025
ಮೂಡುಬಿದಿರೆ: ಗಾಂಜಾ ಪೆಡ್ಲರ್, ರೌಡಿಶೀಟರ್ ಕಲ್ಲಡ್ಕದ ತೌಸೀಫ್ ಯಾನೆ ಅಪ್ಪಿಯನ್ನು ಮೂಡುಬಿದಿರೆ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಮತ್ತು ಅವರ ತಂಡವು ಸಿನಿಮೀಯ ಶೈಲಿಯಲ್ಲಿ ಕಾಯಾ೯ಚರಣೆ ನಡೆಸಿ ಸೆರೆ ಹಿಡಿದು ಆತನಿಂದ ಸುಮಾರು 50 ಸಾವಿರದಷ್ಟು ಅಂದಾಜಿನ 10 ಗ್ರಾಂ. ಎಂ.ಡಿ.ಎಂ.ಎ ಮಾದಕವಸ್ತು ಹಾಗೂ ತಲವಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತೌಸೀಫ್ ಯಾನೆ ಅಪ್ಪಿ ತಲವಾರು ಇಟ್ಟುಕೊಂಡು ಕೊಡಂಗಲ್ಲು ಬಳಿ ಕಾರೊಂದರಲ್ಲಿ ತಿರುಗಾಡುತ್ತಿರುವ ಖಚಿತ ಮಾಹಿತಿಯನ್ನು ಪಡೆದ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಅವರ ನೇತೃತ್ವದ ಪೊಲೀಸರ ತಂಡವು ಕೊಡಂಗಲ್ಲು ಸಮೀಪ ತೆರಳಿದಾಗ ಅಲ್ಲಿ ಎದುರುಗಡೆ ಪೊಲೀಸರನ್ನು ಕಂಡ ಆತ ಕಾರನ್ನು ಹಿಂದಕ್ಕೆ ಚಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ.ಪೊಲೀಸರು ಸುತ್ತುವರಿದಾಗ ಆತ ಕಾರಿನಿಂದಿಳಿಯದೆ ಅಲ್ಲೂ ಪೊಲೀಸರಿಗೆ ವಿರುದ್ಧವಾಗಿ ವರ್ತಿಸಿದ್ದ. ಆಗ ಕಾರಿನ ಗ್ಲಾಸನ್ನು ಒಡೆಯಲು ಪೊಲೀಸರು ಮತ್ತು ಸಾವ೯ಜನಿಕರು ಮುಂದಾದರು ಆಗ ಕಾರಿನಿಂದ ಹೊರ ಬಂದ ಆತನನ್ನು ಹಿಡಿಯುವಲ್ಲಿ ಸಂದೇಶ್ ಅವರ ತಂಡ ಯಶಸ್ವಿಯಾಗಿದೆ.
ಆತನ ಕಾರಿನಲ್ಲಿ ಎಂ.ಡಿ.ಎಂ.ಎ ಮಾದಕ ವಸ್ತು, ಒಂದು ತಲವಾರು ಪತ್ತೆಯಾಗಿದೆ.
ಆರೋಪಿಯ ವಿರುದ್ಧ ಮಾದಕ ವಸ್ತು ಹಾಗೂ ಶಸ್ತ್ರಾಸ್ತ್ರ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆತನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಐದು ಪ್ರಕರಣಗಳಿದ್ದು ರೌಡಿಶೀಟರ್ ಆಗಿದ್ದಾನೆ.
ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಅಕೀಲ್ ಅಹ್ಮದ್, ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೈನ್, ನಾಗರಾಜ್, ದೇವರಾಜ್, ಚಂದ್ರಹಾಸ ರೈ ಪಾಲ್ಗೊಂಡಿದ್ದರು.

