ಡಿ.8 ರಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಮ್ಯುನಿಸ್ಟ್ ಪಕ್ಷದಿಂದ ಬೃಹತ್ ಮೆರವಣಿಗೆ
Friday, December 5, 2025
ಮೂಡುಬಿದಿರೆ: ಭಾರತ ಕಮ್ಯೂನಿಸ್ಟ್ ಪಕ್ಷದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಡಿ.8ರಂದು ಬೆಳಿಗ್ಗೆ 10ಕ್ಕೆ ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿ ತನಕ ಬೃಹತ್ ಮೆರವಣಿಗೆ ಮತ್ತು ಬಹಿರಂಗ ಸಭೆಯು ನಡೆಯಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ. ಯಾದವ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಈ ಹೋರಾಟ ನಡೆಯಲಿದ್ದು ಪಕ್ಷದ ಮೂಡುಬಿದಿರೆ ತಾಲೂಕು ಸಮಿತಿಯು ಸಂಪೂರ್ಣ ಬೆಂಬಲ ಘೋಷಿಸಿದೆ. ಈ ಸಭೆಯಲ್ಲಿ ಜಿಲ್ಲಾ ಮಟ್ಟದ ಬೇಡಿಕೆಗಳೊಂದಿಗೆ ಮೂಡುಬಿದಿರೆ ತಾಲೂಕು ಮಟ್ಟದ ಬೇಡಿಕೆಗಳನ್ನು ಈಡೇರಿಸಲು ಆರ್ಥಿಕ ಯೋಜನೆಗಳನ್ನು ಸಿದ್ಧಪಡಿಸಬೇಕೆಂದು ಒತ್ತಾಯಿಸಲಾಗುವುದು.
ದ.ಕ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು. ವೆನ್‌ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಹಾಗೂ ಇತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು.
ಮಂಗಳೂರು ಬಸ್‌ನಿಲ್ದಾಣದಿಂದ ದೂರದೂರುಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಬೇಕು. ಅಲ್ಲದೆ ಮೂಡುಬಿದಿರೆಯಿಂದ ಇತರ ಗ್ರಾಮೀಣ ಪ್ರದೇಶಗಳಿಗೂ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ, ತಾಲೂಕು ಸಮಿತಿಯ ಸದಸ್ಯರಾದ ಗಿರಿಜಾ, ಲಕ್ಷ್ಮೀ, ರಾಧಾ ಉಪಸ್ಥಿತರಿದ್ದರು.