ಭಟ್ಟಾರಕ ಸ್ವಾಮೀಜಿಯವರಿಂದ ಬಿಹಾರ, ಜಾರ್ಖಂಡ್ ಜೈನ ಕ್ಷೇತ್ರಗಳ ದರ್ಶನ
Wednesday, December 3, 2025
ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾತುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಪ್ರಮುಖ ಜೈನ ಸಿದ್ಧ ಕ್ಷೇತ್ರಗಳು ಮತ್ತು ಬೌದ್ಧ ಧಾರ್ಮಿಕ ಕೇಂದ್ರಗಳಿಗೆ ಯಾತ್ರೆ ಕೈಗೊಂಡರು.
ಸ್ವಾಮೀಜಿಗಳು ಬಿಹಾರದ ರಾಜಗಿರಿಯ ವಿಪುಲಾಚಲ ಪರ್ವತ, ಕುಂಡಲಪುರ, ಪಾವಾಪುರಿ, ಬದ್ದಲ್‌ಪುರ, ನಳಂದ ವಿಶ್ವವಿದ್ಯಾಲಯ ಸಮುಚ್ಚಯ ಸೇರಿದಂತೆ ಪ್ರಮುಖ ಜೈನ ಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಿದರು.
ನಳಂದ ವಿಶ್ವವಿದ್ಯಾಲಯ ಸಮುಚ್ಚಯದಲ್ಲಿ ನಡೆದ ಅಂತಾರಾಷ್ಟ್ರೀಯ ತ್ರಿಪಿಟಕ ಮಂತ್ರ ಪಠಣಾ ಗೋಷ್ಠಿ ಮತ್ತು ಬುದ್ಧಗಯಾ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಪಾಲ್ಗೊಂಡರು. ಈ ಕಾರ್ಯಕ್ರಮಗಳಲ್ಲಿ ಬ್ಯಾಂಕಾಕ್‌ನ ಬೌದ್ಧ ಭಿಕ್ಷುಗಳು ಸೇರಿದಂತೆ ಅನೇಕ ವಿದ್ವಾಂಸರು, ಗಣ್ಯರು ಉಪಸ್ಥಿತರಿದ್ದರು.
ಮಂಗಳವಾರ ಜಾರ್ಖಂಡ್‌ನ ಕೊಡರ್ಮಾದಲ್ಲಿ ಜೈನ ಸಮಾಜವು ಆಯೋಜಿಸಿದ್ದ ಆರಾಧನಾ ಸಮಾರಂಭದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿ, ಆಚಾರ್ಯ ಮಾನತುಂಗಾ ವಿರಚಿತ, ಆದಿನಾಥ ಸ್ವಾಮಿಯ 48 ಶ್ಲೋಕಗಳಿರುವ ಈ ಸ್ತೋತ್ರವು ಜಗತ್ತಿನ ಸುಮಾರು 130 ಭಾಷೆಗಳಿಗೆ ಅನುವಾದಗೊಂಡ ಜನಪ್ರಿಯ ಸ್ತೋತ್ರವಾಗಿದೆ. ಸಂಸಾರ ಜೀವನದಲ್ಲಿ ದುಃಖ ತಪ್ಪಿದ್ದಲ್ಲ. ಧಾರ್ಮಿಕರಿಗೆ ಆರಾಧನೆ, ಪೂಜೆ, ಮತ್ತು ಚತುರ್ವಿಧ ದಾನದ ಮೂಲಕ ಜನ ಸಾಮಾನ್ಯರ ದುಃಖವನ್ನು ದೂರ ಮಾಡಲು ಸಾಧ್ಯವಿದೆ. ಭಕ್ತಿ, ಪೂಜೆ ಮತ್ತು ಆರಾಧನೆಯು ಮನಸ್ಸಿಗೆ ಶಾಂತಿ ನೀಡುವುದು. ಭಾರತೀಯ ವೈದ್ಯಶಾಸ್ತ್ರವು ಸ್ವರ ಮತ್ತು ಬೀಜ ಮಂತ್ರ ವಿದ್ಯೆಯ ಮೂಲಕ ಹಲವು ರೋಗಗಳನ್ನು ಗುಣಪಡಿಸಲು ಸಾಧ್ಯ ಎಂದು ತಿಳಿಸಿದ್ದು, ಇದಕ್ಕೆ ವಿಶೇಷ ಮಹತ್ವ ನೀಡಿದೆ ಎಂದರು.
