ಸಮೃದ್ಧಿ ಸಂಜೀವಿನಿ ಒಕ್ಕೂಟದಿಂದ ಗ್ರಾಮೀಣ ಉತ್ಪನ್ನಗಳ ಮಾರಾಟ: ಸ್ವ ಉದ್ಯೋಗ ತರಬೇತಿ
ದ.ಕ. ಜಿಲ್ಲಾ ಪಂಚಾಯತ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಮಾರಾಟ ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಗ್ರಾಮೀಣ ಭಾಗದ ಮಹಿಳೆಯರು ಮನೆಯಲ್ಲಿ ತಯಾರಿಸುತ್ತಿದ್ದ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಜೀವಿನಿ ಮೂಲಕ ಮಾರುಕಟ್ಟೆಗಳನ್ನು ಒದಗಿಸಿ ಮಹಿಳೆಯರನ್ನು ಸಬಲೀಕರಣ ಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಅವರಿಗೆ ಸ್ವಸಹಾಯ ಗುಂಪುಗಳು ಹಾಗೂ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗಿಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಜನರ ಸ್ವಾವಲಂಬಿ ಜೀವನ, ಕೌಶಲ್ಯಾಭಿವೃದ್ಧಿ, ಸಾಮಾಜಿಕ ಸಬಲತೆಗೆ ಆದ್ಯತೆ ನೀಡಿ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಎನ್.ಆರ್.ಎಲ್.ಎಂ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ನಿಖಿಲ್, ಹೊಸಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತ ಕುಮಾರಿ ಎಂ., ಸ್ತ್ರೀಶಕ್ತಿ ಮೂಡುಬಿದಿರೆ ವಲಯ ಮೇಲ್ವಿಚಾರಕಿ ಶುಭ, ಆದರ್ಶ ನಿರ್ದೇಶಕರಾದ ಶೆರ್‍ಲಿ ಟಿ. ಬಾಬು, ಇಮ್ಯಾನ್ಯುವೆಲ್ ಮೋನಿಸ್ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಗೋಪಿ ಮತ್ತು ಬಳಗನ ಪ್ರಾರ್ಥನೆಗೈದರು. ನೆಲ್ಲಿಕಾರು ಎಂಬಿಕೆ ಗೀತಾ ಜೈನ್ ಸ್ವಾಗತಿಸಿದರು. ಹೊಸಬೆಟ್ಟು ಎಂಬಿಕೆ ಮಮತಾ ಕಾರ್ಯಕ್ರಮ ನಿರೂಪಿಸಿ, ಶೋಭಾ ಭಾಸ್ಕರ್ ಧನ್ಯವಾದವಿತ್ತರು.
ಸಭಾ ಕಾರ್ಯಕ್ರಮದ ನಂತರ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ನಡೆಯಿತು.
ಶನಿವಾರ ಮತ್ತು ಭಾನುವಾರ ಸಮಾಜ ಮಂದಿರ ಸಭಾದಲ್ಲಿ ಸ್ವಸಹಾಯ ಸಂಘಗಳ ಗ್ರಾಮೀಣ ಮಹಿಳೆಯರಿಂದ ತಯಾರಿಸಲ್ಪಟ್ಟ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

