ಹೈಕೋರ್ಟ್ ಆದೇಶ ಮೀರಿ ಇರುವೈಲಿನಲ್ಲಿ ಮನೆ ನಿರ್ಮಾಣ

ಹೈಕೋರ್ಟ್ ಆದೇಶ ಮೀರಿ ಇರುವೈಲಿನಲ್ಲಿ ಮನೆ ನಿರ್ಮಾಣ


ಮೂಡುಬಿದಿರೆ: ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿಮಾ೯ಣ ಮಾಡಿದ್ದ ಮನೆ ತೆರವಿಗೆ ಹೈಕೋರ್ಟ್ ಆದೇಶ ನೀಡಿದ್ದರೂ ಪಿಡಿಒ ತೆರವುಗೊಳಿಸದೆ ಕಾಮಗಾರಿ ಮುಂದುವರಿಸಲು ಅವಕಾಶ ನೀಡಿರುವ ಘಟನೆ ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.


ಇರುವೈಲಿನ ಕೊಲಾಯಿಕೋಡಿ ಎಂಬಲ್ಲಿ ರವಿಂದ್ರ ಶೆಟ್ಟಿ ಅವರು ಸರ್ವೆ ನಂಬ್ರ 99/1ರ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಯಶೋಧ ಯಮುನಾ ಶೆಟ್ಟಿ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ತಹಶೀಲ್ದಾರರಿಗೆ ದೂರು ನೀಡಿದ್ದರು. ಆದರೆ ಒಂದು ವರ್ಷದಿಂದಲೂ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಿದ್ದರೂ, ಈ ಅನಧಿಕೃತ ನಿರ್ಮಾಣದ ತೆರವಿಗೆ ಪಿಡಿಒ ಮತ್ತು ತಹಶೀಲ್ದಾರರು ಏನೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದೂರುದಾರರು ತಮ್ಮ ಹಸುಗಳನ್ನು ಮಾರಿ ಬಂದ ಹಣದಲ್ಲಿ ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ (ನಂಬ್ರ: 36526/2025) ಸಲ್ಲಿಸಿದ್ದರು.

ದೂರು ನೀಡಿದ್ದರೂ ಕ್ರಮಕೈಗೊಳ್ಳದ ಅಧಿಕಾರಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಆರ್. ನಟರಾಜ್ ಅವರು ಅನಧಿಕೃತ ನಿರ್ಮಾಣಕ್ಕೆ ಡಿಸೆಂಬರ್ 4ರಂದು ತಡೆಯಾಜ್ಞೆ ನೀಡಿದ್ದಾರೆ. 

ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪರಿಶೀಲನೆ ನಡೆಸಿ ಅನಧಿಕೃತ ಕಾಮಗಾರಿಯನ್ನು ಪೊಲೀಸರ ನೆರವಿನಿಂದ ತಕ್ಷಣ ನಿಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು.

ರವೀಂದ್ರ ಶೆಟ್ಟಿ ಅವರು ಈ ಹಿಂದೆ ಸದ್ರಿ ಪ್ರದೇಶದ ಬಳಿಯಲ್ಲಿ ಕರ‍್ಯನಿರ್ವಹಿಸುತ್ತಿದ್ದ ಕೋರೆಯೊಂದರ ಕಾರ್ಮಿಕರ ಶೆಡ್ಡಿನ ವಿದ್ಯುತ್ ಸಂಪರ್ಕವನ್ನು ಈ ಅನಧಿಕೃತ ಮನೆಗೆ ವರ್ಗಾಯಿಸಿದ ಆರೋಪವನ್ನೂ ಎದುರಿಸುತ್ತಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ನೀಡಿದ ಮೇಲೆಯೂ ತರಾತುರಿಯಿಂದ ಕಾಮಗಾರಿ ಪೂರ್ಣಗೊಳಿಸಿ ಮನೆಯಲ್ಲಿ ವಾಸಿಸಲು ಪ್ರಯತ್ನಿಸುತ್ತಿದ್ದು ನ್ಯಾಯಾಂಗ ನಿಂದನೆಯಾಗಿದೆ.

ಈ ಬಗ್ಗೆ ಲೋಕಾಯುಕ್ತ, ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ.ಇದೀಗ ಇರುವೈಲಿಗೆ ಹೊಸದಾಗಿ ಬಂದಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರು ನೋಟೀಸು ನೀಡಿದ್ದರೂ, ಪ್ರತಿವಾದಿ ರವೀಂದ್ರ ಶೆಟ್ಟಿ ಅವರು ತರಾತುರಿಯಿಂದ ಕಾಮಗಾರಿ ಮುಂದುವರಿಸಲು ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ದೂರುದಾರರು ಲೋಕಾಯುಕ್ತ ಮತ್ತು ದ.ಕ. ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ. ಕಾಮಗಾರಿ ಮುಂದುವರಿಯುತ್ತಿರುವ ಬಗ್ಗೆ ಹೈಕೋರ್ಟಿಗೆ ಕೂಡಾ ಮಾಹಿತಿ ನೀಡಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article