ರೈತರಿಗೆ ಸರಿಯಾದ ಬೆಳೆ ವಿಮೆ ಕೂಡಲೇ ಪಾವತಿಸಿ: ವಿಳಂಬವಾದಲ್ಲಿ ಉಗ್ರ ಪ್ರತಿಭಟನೆಗೆ ಸಜ್ಜು
ರೈತರು ಕಷ್ಟಪಟ್ಟು ದುಡಿದು ಅದರಿಂದ ಬಂದ ಹಣದಲ್ಲಿ ವಿಮೆಯನ್ನು ಕಟ್ಟಿರುತ್ತಾರೆ. ಅಲ್ಲದೆ ಕೃಷಿ ಸಾಲವನ್ನು ಕೂಡ ಹಲವರು ಮಾಡಿರುತ್ತಾರೆ. ಇದೀಗ ಸಾಲ ಮರುಪಾವತಿಗೆ ಕೂಡ ತುಂಬಾ ಕಷ್ಟದಲ್ಲಿದ್ದಾರೆ. ಸರಿಯಾದ ಬೆಳೆ ವಿಮೆ ಬಂದಲ್ಲಿ ಸಾಲದ ಕಂತನ್ನು ಕೂಡ ಕಟ್ಟಬಹುದೆಂದು ತಿಳಿದ ರೈತರು ಇದೀಗ ಬೆಳೆ ವಿಮಾ ಹಣ ಬರದೆ ಕಂಗಾಲಾಗಿದ್ದಾರೆ. ಆದ್ದರಿಂದ ಸರಕಾರವು ತಡ ಮಾಡದೆ ಕೂಡಲೇ ರೈತರಿಗೆ ಸರಿಯಾದ ಬೆಳೆ ವಿಮೆಯನ್ನು ಪಾವತಿ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದೆಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರು ಶುಕ್ರವಾರ ಸುಬ್ರಹ್ಮಣ್ಯದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದರು.
ಒಂದು ಎಕರೆ, ಎರಡು ಎಕರೆ ಕೃಷಿ ಭೂಮಿಯನ್ನು ಹೊಂದಿದ ಸಣ್ಣ ರೈತರು ತಾವು ಕಟ್ಟಿದ ಬೆಳೆ ವಿಮೆಗೆ ಕೆಲವು ಕಡೆಗಳಲ್ಲಿ ಬರಿ 200 ರೂ. 500 ರೂ. ಹೀಗೆ ಬಂದದ್ದು ಇದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ಕೂಡ ಅಧಿಕವಾಗಿ ಇದ್ದು ಕೊಳೆರೋಗ, ಎಲೆ ಚುಕ್ಕಿ ರೋಗ, ಹಳೆದಿರೋಗ ಬಂದು ರೈತರ ಕೃಷಿ ಸಂಪೂರ್ಣ ನಾಶ ಕೂಡ ಆಗಿರುತದೆ. ಇದರಿಂದ ಮಾನಸಿಕವಾಗಿ ಕುಗ್ಗಿದ ರೈತರು ಕೃಷಿಯ ಆಸೆಯನ್ನೇ ಬಿಡುವಂತಾಗಿದೆ.
ಇದಕ್ಕೆಲ್ಲ ಕಾರಣ ಮಳೆಯ ಪ್ರಮಾಣ ಅಳೆಯುವ ಇಲಾಖೆಯವರು ಸರಕಾರಕ್ಕೆ ಸರಿಯಾದ ವರದಿ ಕೊಡದೆ, ಅಧಿಕಾರಿಗಳು ಕೂಡ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದಾಗಿದೆ. ಈ ಬಗ್ಗೆ ಸರಕಾರವು ಕೂಡಲೇ ಎಚ್ಚೆತ್ತುಕೊಂಡು ಸರಿಯಾಗಿ ಮಾಹಿತಿ ನೀಡದೇ ಇರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಹಾಗೂ ರೈತರಿಗೆ ಕೂಡಲೇ ಸರಿಯಾದ ಬೆಳೆ ವಿಮೆಯನ್ನು ಪಾವತಿಸಬೇಕು ಎಂದು ಅವರು ಅಗ್ರಹಿಸಿದರು.
ಅಲ್ಲದೆ ರೈತರ ಸೊಸೈಟಿಗಳನ್ನು ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನವರು ಕೂಡಲೇ ಸರಕಾರವನ್ನು ಈ ಬಗ್ಗೆ ಅಗ್ರಹಿಸಬೇಕು ಹಾಗೂ ರೈತರಿಗೆ ಸರಿಯಾದ ವಿಮೆಯನ್ನು ಪಾವತಿಸುವ ವ್ಯವಸ್ಥೆ ಮಾಡಬೇಕು ಎಂದು ಕಿಶೋರ್ ಶಿರಾಡಿ ಹೇಳಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಯಪ್ರಕಾಶ್ ಕೂಜುಗೋಡು, ಅಶೋಕ್ ಕುಮಾರ ಮೂಲೆಮಜಲು, ಕಿಶೋರ್ ಕುಮಾರ್ ಕೂಜುಗೋಡು, ರಮಾನಂದ ಎಣ್ಣೆ ಮಜಲು, ಗಣೇಶ್ ಪಿಲಿಕಜ, ಉಮೇಶ್ ಹೊಸಳ್ಳಿಕೆ, ಶಿವರಾಮ ನಿಕ್ರಾಜೆ, ಸುಬ್ರಹ್ಮಣ್ಯ ಕೆ.ಎಲ್., ಶ್ರೀಧರ ಅಂಗಣ, ಮಾಧವ ಕೊಂಬಾರು, ಬಾಲಕೃಷ್ಣ ಕಟ್ಟ ಮನೆ, ಚಿದಾನಂದ ಕಟ್ರಮನೆ, ಪ್ರಶಾಂತ ಕೊಡಿಬೈಲು ಮತ್ತಿತರರು ಉಪಸ್ಥಿತರಿದ್ದರು.