ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಕ್ಕೆ ಅನ್ಯಧರ್ಮದವರನ್ನು ಆಹ್ವಾನಿಸಿರುವುದನ್ನು ಖಂಡಿಸಿ ಸುಬ್ರಹ್ಮಣ್ಯದಲ್ಲಿ ಸೋಮವಾರ ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.

ಸಮಿತಿಯ ಪ್ರಮುಖರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವರ ಕಚೇರಿಗೆ ತೆರಳಿ, ಮಾತುಕತೆ ನಡೆಸಿದರು. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಕಿರುಷಷ್ಠಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಅನ್ಯಧರ್ಮಿಯರನ್ನು, ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲದವರನ್ನು ಹಿಂದೂ ಶ್ರದ್ಧಾಕೇಂದ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಖಂಡನೀಯ. ಈ ಹಿಂದೆ ಅನ್ಯಧರ್ಮದ ಒಂದು ಅಧಿಕಾರಿಯ ಹೆಸರು ಉಲ್ಲೇಖ ಆಗಿರುವ ಸಂದರ್ಭದಲ್ಲಿ ಈ ಅಧಿಕಾರಿ ಹಿಂದೆ ಸರಿದಿರುವ ಉದಾಹರಣೆ ಕೂಡ ಇದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ ಪ್ರಕಾರ ಅನ್ಯಧರ್ಮದವರಿಗೆ ದೇವಸ್ಥಾನದ ಯಾವುದೇ ಟೆಂಡರುಗಳಾಗಲಿ ಹಾಗೂ ವ್ಯಾಪಾರ ವೈವಾಟುಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಆದರೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅನ್ಯಮತಿಯರನ್ನು ಆಹ್ವಾನಿಸಿರುವುದು ಸಜ್ಜನ ಭಕ್ತರ ಶ್ರದ್ದೆಯ ಭಾವನೆಗಳಿಗೆ ಧಕ್ಕೆ ಉಂಟಾಗಿರುತ್ತದೆ. ಇದನ್ನು ತಾವುಗಳು ಗಮನಿಸಿ ಮುಂದೆಯು ಕೂಡ ಇಂತಹ ನಿದರ್ಶನಗಳು ಬರದಂತೆ ಗಮನವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಪ್ರತಿಭಟನಾಕಾರರು ಆಗ್ರಹಿಸಿದರು. ಹಾಗೂ ಜಿಲ್ಲಾಧಿಕಾರಿಗಳು, ಇಲಾಖೆಗೆ ಇಒ ಮುಖಾಂತರ ಮನವಿ ಸಲ್ಲಿಸಿದರು.

ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಅನಾಧಿಕಾಲದಿಂದಲೂ ದೇವರ ಪಾವಿತ್ರ್ಯತೆಗೆ ಧಕ್ಕೆ ಬರುವ ಸಂದರ್ಭದಲ್ಲಿ ಹಿಂದೂ ಸಮಾಜ ಪ್ರತಿಭಟಿಸಿ, ಜನರಿಗೆ ಮನವರಿಕೆ ಮಾಡುವ ಕೆಲಸದಿಂದಾಗಿ ಹಿಂದೂ ಸಮಾಜದ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಅನ್ಯಧರ್ಮಿಯರಿಗೆ ಅವಕಾಶ ಇಲ್ಲದಿದ್ದರೂ ಅವಕಾಶ ನೀಡಿ ಪ್ರತಿಭಟನೆ ನಡೆಸುವಂತಾಗಿದೆ. ಯಾವುದೇ ಕಾರಣಕ್ಕೂ ಅವರಿಗೆ ಅವಕಾಶ ನೀಡದಂತೆ ಮನವಿ ಸಲ್ಲಿಸಿದ್ದೇವೆ. ಅನ್ಯಧರ್ಮಿಯರು ಬಾರದ ರೀತಿಯಲ್ಲಿ ಮೇಲಾಧಿಕಾರಿಗಳಲ್ಲಿ ಮಾತನಾಡುವ ಬಗ್ಗೆ ದೇವಸ್ಥಾನದ ಅಧಿಕಾರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿದ್ದೇವೆ ಎಂದ ಅವರು, ಕಾರ್ಯಕ್ರಮಕ್ಕೆ ಅನ್ಯಮತೀಯರು ಬಂದಲ್ಲಿ ಘೇರಾವ್ ಹಾಕಲಾಗುವುದು, ಇದಕ್ಕೆ ಅವಕಾಶ ನೀಡದಿರಿ ಎಂದು ಆಗ್ರಹಿಸಿದರು.
ಇಲಾಖೆಯ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರೊಟೊಕಾಲ್ ಪ್ರಕಾರ ಎಲ್ಲರಿಗೂ ಅವಕಾಶ ನೀಡಬೇಕಾಗುತ್ತದೆ. ಅವರಿಗೆ ಅವಕಾಶ ನೀಡದೇ ಇರುವಂತೆ ಮಾಡಲು ನಮ್ಮ ಹಂತದಲ್ಲಿ ಸಾಧ್ಯವಿಲ್ಲ. ಅದನ್ನು ಅಧಿವೇಶದಲ್ಲಿ ಪ್ರಸ್ತಾಪಿಸಿ, ಚರ್ಚೆ ಮಾಡಿ ಕಾರ್ಯಗತ ಮಾಡಬೇಕಾಗುತ್ತದೆ ಎಂದು ಉಪಸ್ಥಿತರಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಪ್ರಸ್ತಾಪಿಸಿದರು.
ಸರಕಾರದ ಪ್ರೊಟೊಕಾಲ್ ಪ್ರಕಾರ ಆಮಂತ್ರಣ ತಯಾರಿಸಲಾಗಿದೆ. ನಿಮ್ಮ ಮನವಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದು ದೇವಸ್ಥಾನದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಭರವಸೆ ನೀಡಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಅಜಿತ್ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು ಮತ್ತಿತರರು ಮಾತನಾಡಿದರು.
ಶ್ರೀ ಕ್ಷೇತ್ರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಚಿದಾನಂದ ಕಂದಡ್ಕ, ಪ್ರಮುಖರಾದ ರಘು ಸಕಲೇಶಪುರ, ಮೋಹನದಾಸ್, ಪ್ರಸನ್ನ ದರ್ಬೆ, ಕಿಶೋರ್ ಶಿರಾಡಿ, ಸುಜಾತ ಕಲ್ಲಾಜೆ, ರಾಜೇಶ್ ಎನ್.ಎಸ್., ಶ್ರೀಕುಮಾರ ಬಿಲದ್ವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಪೊಲೀಸರು ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.